9 ವರ್ಷಗಳ ಬಳಿಕ ಮನೆಗೆ ಮರಳಿದ ಮುಂಬೈ ಇಂಡಿಯನ್ಸ್‌ ಆಟಗಾರ !

Prasthutha|

ಸಾಧನೆ ಮಾಡಿದ ಬಳಿಕವಷ್ಟೇ ಮನೆಗೆ ಮರಳುತ್ತೇನೆ ಎಂದು ಶಪಥ ಮಾಡಿದ್ದ ಕ್ರಿಕೆಟಿಗನೊಬ್ಬ ಬರೋಬ್ಬರಿ 9 ವರ್ಷ ಮತ್ತು ಮೂರು ತಿಂಗಳ ಬಳಿಕ ತಮ್ಮ ತಂದೆ- ತಾಯಿಯನ್ನು ಭೇಟಿಯಾದ ಅಪರೂಪದ ಘಟನೆ ನಡೆದಿದೆ.  

- Advertisement -

ಮುಂಬೈ ಇಂಡಿಯನ್ಸ್‌ ಮತ್ತು ಮಧ್ಯ ಪ್ರದೇಶ ರಣಜಿ ಆಟಗಾರ ಕುಮಾರ್‌ ಕಾರ್ತಿಕೇಯ ಸಿಂಗ್ ಅವರು ಸರಿಸುಮಾರು 10 ವರ್ಷಗಳ ಹಿಂದೆ, ಕ್ರಿಕೆಟ್‌ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸನ್ನು ಇಟ್ಟುಕೊಂಡು ತಮ್ಮ ಮನೆ ತೊರೆದಿದ್ದರು. ಇದೀಗ ಮನೆಗೆ ಮರಳಿ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ತಮ್ಮ ತಂದೆ- ತಾಯಿಯೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕುಮಾರ್‌, ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. “9 ವರ್ಷ 3 ತಿಂಗಳ ಬಳಿಕ ನನ್ನ ಕುಟುಂಬ ಹಾಗೂ ತಾಯಿಯನ್ನು ಭೇಟಿಯಾಗಿದ್ದೇನೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ

ಉತ್ತರ ಪ್ರದೇಶ ಮೂಲದವರಾದ ಕುಮಾರ ಕಾರ್ತಿಕೇಯ ಅವರು ಸುಮಾರು ಒಂಬತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕ್ರಿಕೆಟ್ ಅಕಾಡೆಮಿ ಸೇರಿದ್ದರು. 2018ರಲ್ಲಿ ವಿಜಯ್‌ ಹಝಾರೆ ಟ್ರೋಫಿಯಲ್ಲಿ ಆಡುವ ಮೂಲಕ ʻಲಿಸ್ಟ್‌ ಎʼ ಆಟಗಾರನಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್‌, ಆ ಬಳಿಕ ಮಧ್ಯಪ್ರದೇಶದ ರಣಜಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 24ರ ಪ್ರಾಯದ ಎಡಗೈ ಲೆಗ್‌ ಸ್ಪಿನ್ನರ್‌ ಕುಮಾರ್‌ ಕಾರ್ತಿಕೇಯ ಅವರು, ಕಳೆದ 2021-22ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ 11 ಇನಿಂಗ್ಸ್‌ಗಳಿಂದ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

- Advertisement -

“ನಾನು 9 ವರ್ಷಗಳಿಂದ ಮನೆಯಿಂದ ದೂರ ಉಳಿದಿದ್ದೆ. ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದೇನೆ ಎಂದು ಅನ್ನಿಸಿದಾಗ ಮಾತ್ರ ಮನೆಗೆ ಮರಳಲು ನಿರ್ಧರಿಸಿದ್ದೆ. ನನ್ನ ತಾಯಿ ಮತ್ತು ತಂದೆ  ಬಹಳಷ್ಟು ಬಾರಿ ಮನೆಗೆ ಮರಳುವಂತೆ ಒತ್ತಾಯಿಸಿದ್ದರು. ಆದರೆ ನಾನು ನನ್ನ ಮಾತಿಗೆ ಬದ್ಧನಾಗಿದ್ದೆ. ಈಗ, ಅಂತಿಮವಾಗಿ, ನಾನು ಐಪಿಎಲ್ ನಂತರ ಮನೆಗೆ ಮರಳುತ್ತೇನೆ. ನನ್ನ ಕೋಚ್ ಸಂಜಯ್ ಸರ್ ಮಧ್ಯಪ್ರದೇಶದ ರಣಜಿ ತಂಡಕ್ಕೆ ನನ್ನ ಹೆಸರನ್ನು ಸೂಚಿಸಿದ್ದರು. ಮೊದಲ ವರ್ಷದಲ್ಲಿ, ನನ್ನ ಹೆಸರು 23 ವರ್ಷದೊಳಗಿನವರ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಕಾಣಿಸಿಕೊಂಡಿತು” ಎಂದು ಕುಮಾರ್‌ ಹೇಳಿದ್ದಾರೆ. 

Join Whatsapp