ಕಾಸರಗೋಡು: ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಸ್ಪೋಟಗೊಂಡ ಆಂತರಿಕ ಕಲಹ

Prasthutha|

►ಸಿಪಿಐಎಂ ಜೊತೆ ಕೈಜೋಡಿಸಿದವರ ವಿರುದ್ಧ ಆರೆಸ್ಸೆಸ್ ಕ್ರಮದ ಭರವಸೆ – ಪ್ರತಿಭಟನೆ ಕೈ ಬಿಟ್ಟ ಕಾರ್ಯಕರ್ತರು

- Advertisement -

ಕಾಸರಗೋಡು: ಬಿಜೆಪಿ ಕಾರ್ಯಕರ್ತನ ಹತ್ಯೆ ಆರೋಪಿಗೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವಲ್ಲಿ ಸಹಕರಿಸಿದ ಮತ್ತು ಇತರ ಬಿಜೆಪಿಯೊಳಗಿನ ಆಂತರಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿಯ ಮುಂಭಾಗ ಮತ್ತೆ ಕಾರ್ಯಕರ್ತರು ಧರಣಿ ನಡೆಸಿದ್ದು, ಈ ವಿಚಾರವಾಗಿ ಆರೆಸ್ಸೆಸ್ ಮಧ್ಯಸ್ಥಿಕೆ ವಹಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಕುಂಬಳೆಯಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಸಿಪಿಐಎಂ ಸದಸ್ಯನಿಗೆ ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಜಿಲ್ಲೆಯ ಬಿಜೆಪಿಯ ಕೆಲ ನಾಯಕರು ಸಹರಿಸಿದ್ದರು ಎಂದು ಆರೋಪಿಸಿ ಬಿಜೆಪಿಯ ಒಂದು ಗುಂಪು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಜಿಲ್ಲಾ ಬಿಜೆಪಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲ ನಾಯಕರು ಕ್ರಮದ ಭರವಸೆ ನೀಡಿದ್ದರು. ಆದರೆ ಸಿಪಿಐಎಂ ಜೊತೆ ಸಹಕಾರಕ್ಕೆ ನೇತೃತ್ವ ನೀಡಿದ ಆರೋಪವಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿ ಕಾರ್ಯಕರ್ತ ರು ಕಚೇರಿ ಮುಂಭಾಗ ಮತ್ತೆ ಧರಣಿ ಕೂತಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಪಕ್ಷದ ಆಂತರಿಕ ವಿಚಾರವಾಗಿ ನಡೆಯುವ ಬಹಿರಂಗ ಪ್ರತಿಭಟನೆಯಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯ ನಾಯಕರಿಗೆ ಮನದಟ್ಟು ಮಾಡಿದ್ದಾರೆ. ಅಲ್ಲದೆ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕೆಂದು ಆರೆಸ್ಸೆಸ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಆರೋಪಿತ ನಾಯಕರ ಮೇಲೆ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಸಿಪಿಐಎಂ ಜೊತೆ ಒಪ್ಪಂದಕ್ಕೆ ಸಹಕರಿಸಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂಬ ಆರೆಸ್ಸೆಸ್ ನಾಯಕರ ಭರವಸೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ ಶ್ರೀಕಾಂತ್, ಪಿ ಸುರೇಶ್ ಕುಮಾರ್ ಶೆಟ್ಟಿ, ಮಣಿಕಂಠನ್ ರೈ ಎಂಬವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದರು.

Join Whatsapp