ಚೆನ್ನೈ: 2018ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಚನಾಥಂ ಎಂಬಲ್ಲಿ ನಡೆದ ಮೂವರು ದಲಿತರ ಭೀಕರ ಕೊಲೆಗೆ ಸಂಬಂಧಿಸಿದಂತೆ ಎಲ್ಲಾ 27 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
2018 ರ ಮೇ 28 ರಂದು ಕಚನಾಥಂ ಎಂಬಲ್ಲಿ ಪರಿಶಿಷ್ಟ ಜಾತಿಯವರಾದ ಆರುಮುಗಂ, ಷಣ್ಮುಗನಾಥನ್ ಮತ್ತು ಚಂದ್ರಶೇಖರನ್ ಎಂಬವನ್ನು ಮೇಲ್ಜಾತಿ ಎಂದು ತಮ್ಮನ್ನು ಕರೆಸಿಕೊಂಡವರು ಅಮಾನುಷವಾಗಿ ಹತ್ಯೆ ನಡೆಸಿದ್ದರು.
ಘಟನೆಯಲ್ಲಿ ಹಲವು ದಲಿತರಿಗೆ ಗಾಯಗಳಾಗಿದ್ದು, ಪ್ರಮುಖವಾಗಿ ತನಶೇಖರನ್ ಎಂಬವರು ಗಾಯಗೊಂಡ ಒಂದೂವರೆ ವರ್ಷದ ಬಳಿಕ ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರಂಗಾಡು ಗ್ರಾಮದ ಸುಮನ್, ಅರುಣ್ ಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಅವರನ್ನು ಒಳಗೊಂಡಂತೆ 33 ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಆರೋಪಿಗಳು ವಿಚಾರಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಆರೋಪಿಗಳ ಪೈಕಿ ಇಬ್ಬರು ಬಾಲಪರಾಧಿಗಳಾಗಿದ್ದರೆ, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದರು. ಇನ್ನುಳಿದ 27 ಆರೋಪಿಗಳು ದೌರ್ಜನ್ಯ ತಡೆ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರು.
ಆಗಸ್ಟ್ 1 ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 27 ಆರೋಪಿಗಳು ದೋಷಿಗಳೆಂದು ನ್ಯಾಯಾಧೀಶರು ಘೋಷಿಸಿದ್ದರು.