ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ನೀಡಲು ಕೆಎಸ್‌ಒಯುಗೆ ಹೈಕೋರ್ಟ್‌ ಆದೇಶ

Prasthutha|

ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) 2013-14 ಮತ್ತು 2014-15ನೇ ಸಾಲಿನ ಇನ್-ಹೌಸ್ ಸಿಸ್ಟಂ (ವಿಶ್ವವಿದ್ಯಾಲಯಯಿಂದಲೇ ವಿದ್ಯಾರ್ಥಿಗಳಿಗೆ ನೇರ ಪ್ರವೇಶಾತಿ) ಅಡಿಯಲ್ಲಿ ವಿವಿಧ ತಾಂತ್ರಿಕೇತರ ಕೋರ್ಸ್‌ಗಳಿಗೆ ನೋಂದಣಿಯಾಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

- Advertisement -

ಬಿಡದಿಯ ಗಂಗಮ್ಮ, ಪಾವಗಡದ ಕೆ.ಎಸ್. ಕವಿತಾ ಸೇರಿ 283 ವಿದ್ಯಾರ್ಥಿಗಳು ಸಲ್ಲಿಸಿದ್ದ 22 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಪಿ ಕೃಷ್ಣಭಟ್ ಅವರಿದ್ದ ಪೀಠ ಆಗಸ್ಟ್‌ 3ರಂದು ಪ್ರಕಟಿಸಿದ್ದು, ಎಲ್ಲ ಅರ್ಜಿಗಳನ್ನೂ ಮಾನ್ಯ ಮಾಡಿದೆ. ಇದರಿಂದ, ಪರೀಕ್ಷೆ ಬರೆದರೂ ಯುಜಿಸಿ ಮಾನ್ಯತೆ ತೊಡಕಿನಿಂದಾಗಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೆಎಸ್‌ಒಯು ಕಾಯಿದೆ-1992ರ ನಿಯಮಾನುಸಾರ 2013-14 ಹಾಗೂ 2014-15ನೇ ಸಾಲಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅರ್ಜಿದಾರ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಒಳಗೆ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಬೇಕು ಎಂದು ಕೆಎಸ್‌ಒಯುಗೆ ನಿರ್ದೇಶಿಸಿರುವ ಹೈಕೋರ್ಟ್, ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ಪಡೆದವರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಕೆಪಿಎಸ್‌ಸಿ, ಸರ್ಕಾರ ಮತ್ತದರ ಅಧೀನ ಸಂಸ್ಥೆಗಳು ಪರಿಗಣಿಸಬೇಕು ಎಂದು ಆದೇಶಿಸಿದೆ.

- Advertisement -

ಅರ್ಜಿದಾರರ ಆಕ್ಷೇಪವೇನು?: ಕೆಎಸ್‌ಒಯು ಮಾನ್ಯತೆಯನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) 2015ರ ಜೂನ್‌ 16ರಂದು ಹಿಂಪಡೆದಿತ್ತು. ಇದರಿಂದ, ಅದಕ್ಕೂ ಮೊದಲೇ ಇನ್-ಹೌಸ್ ವಿದ್ಯಾರ್ಥಿಗಳಾಗಿ ವಿವಿಧ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದವರಿಗೆ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ವಿತರಿಸಿರಲಿಲ್ಲ. ಈ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂಕಪಟ್ಟಿ, ಪದವಿ ಪ್ರಮಾಣಪತ್ರವಿಲ್ಲದೆ ಸರ್ಕಾರಿ ಉದ್ಯೋಗಾವಕಾಶ ಕೈತಪ್ಪುತ್ತಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿಯ ಅವಕಾಶ ಇಲ್ಲದಂತಾಗಿದೆ. ಕೆಎಸ್‌ಒಯುನಲ್ಲಿ ಯಶಸ್ವಿಯಾಗಿ ಪೂರೈಸಿರುವ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp