ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕಳೆದ ಒಂದು ವರ್ಷದ ಆಡಳಿತ ನೋಡಿದರೆ ಸಂಪೂರ್ಣ ಭ್ರಮನಿರಸನವಾಗಿದೆ. ಇವರ ಕಾಲದಲ್ಲಿ ಹಿಂದೆಂದೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ತಿಂಗಳ 28ನೇ ತಾರೀಖಿನಂದು ವರ್ಷಾಚರಣೆಯನ್ನು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳು ತುಂಬುತ್ತದೆ, ಎರಡು ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಬಸವರಾಜ ಬೊಮ್ಮಾಯಿ ಅವರು ಜುಲೈ 28 ರಂದು ಅಧಿಕಾರಕ್ಕೆ ಬಂದಿದ್ದು. ತಾವು ಯಡಿಯೂರಪ್ಪ ಅವರ ಹಾದಿಯಲ್ಲಿ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಲು ಕಾರ್ಯಕ್ರಮ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಬಂದಾಗ ನಮಗೆ ಸ್ವಲ್ಪ ಭರವಸೆ ಇತ್ತು, ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು, ಹೀಗಾಗಿ ಒಂದಷ್ಟು ವಿಭಿನ್ನವಾಗಿ ಕೆಲಸ ಮಾಡಬಹುದು ಎಂಬ ಭರವಸೆ ಇತ್ತು. ಆದರೆ ಕಳೆದ ಒಂದು ವರ್ಷದ ಆಡಳಿತ ನೋಡಿದರೆ ಸಂಪೂರ್ಣ ಭ್ರಮನಿರಸನವಾಗಿದೆ. ಇವರ ಕಾಲದಲ್ಲಿ ಹಿಂದೆಂದೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ. ರಾಜ್ಯದ ಇತಿಹಾಸದಲ್ಲಿ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇಲ್ಲಿನ ಕಂಟ್ರಾಕ್ಟರ್ ಗೆ ಬಂದಿರುವುದು ಇದೇ ಮೊದಲು ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಈ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಬೇರೆ ಯಾವಾಗಲೂ ಮಾಡಿರಲಿಲ್ಲ. 14ನೇ ಹಣಕಾಸು ಆಯೋಗ ನಮ್ಮ ರಾಜ್ಯದ ಪಾಲನ್ನು 42% ಗೆ ನಿಗದಿ ಮಾಡಿತ್ತು, ಆದರೆ ಈ ಅವಧಿಯಲ್ಲಿ ಬಂದಿದ್ದು ಬರೀ 31% ಮಾತ್ರ. ತೆರಿಗೆ ವಸೂಲಿ ಆಗಲಿಲ್ಲ ಎಂಬ ಕಾರಣ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡಿದರು. ನರೇಂದ್ರ ಮೋದಿ ಅವರ ಕಾಲದಲ್ಲಿ 15ನೇ ಹಣಕಾಸು ಆಯೋಗ ರಚನೆ ಯಾಯಿತು. 14 ಮತ್ತು 15ನೇ ಹಣಕಾಸು ಆಯೋಗದ ನಡುವೆ ನಮ್ಮ ಪಾಲಿನ ವ್ಯತ್ಯಾಸ 1.07% ಕಡಿಮೆಯಾಯಿತು. ಈ ಕಾರಣಕ್ಕಾಗಿ ನಮಗೆ 5,495 ಕೋಟಿ ವಿಶೇಷ ಅನುದಾನ ನೀಡಿದ್ದರು. ಆದರೆ ಅದನ್ನು ನಿರ್ಮಲಾ ಸೀತಾರಾಮನ್ ಅವರು ನೀಡಲಿಲ್ಲ. ಸರ್ಕಾರದ ಪರವಾಗಿ ಯಾರು ಕೂಡ ಈ ಹಣಕ್ಕಾಗಿ ಕೇಂದ್ರವನ್ನು ಒತ್ತಾಯ ಮಾಡಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲೂ ಬಸವರಾಜ ಬೊಮ್ಮಾಯಿ ಅವರೇ ಜಿ,ಎಸ್,ಟಿ ಕೌನ್ಸಿಲ್ ಸಭೆಗಳಿಗೆ ಹೋಗುತ್ತಿದ್ದರು, ಮುಖ್ಯಮಂತ್ರಿ ಆದಮೇಲೂ ಅವರೇ ಹೋಗುತ್ತಿದ್ದಾರೆ. ಈ ಹಣವನ್ನು ತರಲು ಒತ್ತಾಯ ಮಾಡದ ಕಾರಣ ಅಂತಿಮ ವರದಿಯಲ್ಲಿ ಇರಲಿಲ್ಲ. 14% ನಷ್ಟವಾಗುತ್ತದೆ ಎಂದು ಜಿ,ಎಸ್,ಟಿ ಪರಿಹಾರವಾಗಿ ಕೊಡಲು ಒಪ್ಪಿಕೊಂಡಿದ್ದರು ಅದೂ ಕೂಡ ಜುಲೈ ಒಂದರಿಂದ ನಿಂತು ಹೋಗಿದೆ. ಬಿಜೆಪಿಯೇತರ ಸರ್ಕಾರಗಳು ಪರಿಹಾರ ಮುಂದುವರೆಸಿ ಎಂದು ಒತ್ತಾಯ ಮಾಡಿದರೂ, ಬೊಮ್ಮಾಯಿ ಅವರು ಕೇಂದ್ರದ ಅಣತಿಯಂತೆ ಒಪ್ಪಿಕೊಂಡು ಸುಮ್ಮನಾಗಿದ್ದಾರೆ. ಆಮೇಲೆ ರಾಜ್ಯಕ್ಕೆ ಬಂದು ಮುಂದಿನ ಎರಡು ಮೂರು ತಿಂಗಳಲ್ಲಿ ಮನವಿಯನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸುಳ್ಳು ಹೇಳಿದರು. ಜಿ,ಎಸ್,ಟಿ ಕೌನ್ಸಿಲ್ ನಲ್ಲಿ ತೀರ್ಮಾನವಾಗದೆ ಮುಂದೆ ತೀರ್ಮಾನವಾಗುತ್ತದೆ ಎಂದರೆ ಯಾರು ನಂಬುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
2020-21 ರಲ್ಲೇ ಸುಮಾರು 11,000 ಕೋಟಿ ಜಿ,ಎಸ್,ಟಿ ಬಾಕಿ ಬರಬೇಕಿತ್ತು ಅದನ್ನು ತೆಗೆದುಕೊಳ್ಳಲು ಆಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರು ಇದ್ದಾರೆ. ಮುಖ್ಯಮಂತ್ರಿಗಳೇ ಜಿ.ಎಸ್.ಟಿ ಕೌನ್ಸಿಲ್ ಸದಸ್ಯರಿದ್ದಾರೆ ಆದರೂ ಯಾರೋಬ್ಬರೂ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಇದನ್ನೇ ಒಂದು ವರ್ಷದ ಸಂಭ್ರಮ ಎಂದು ಆಚರಣೆ ಮಾಡುತ್ತೀರಾ? ಜಿಎಸ್‌ಟಿ ಸಭೆಯಲ್ಲಿ ಹಾಲು, ಮೊಸರು, ಮಂಡಕ್ಕಿ ಗಳಿಗೆ 0% ಇಂದ 5% ಜಿಎಸ್‌ಟಿ ವಿಧಿಸಿದ್ದಾರೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಯಾರಾದರೂ ಸಾಮಾನ್ಯ ಜನ ಬಳಸುವ ಮಂಡಕ್ಕಿ ಮೇಲೆ ಜಿಎಸ್ ಟಿ ಹಾಕುತ್ತಾರ? ಇದು ಬಸವರಾಜ ಬೊಮ್ಮಾಯಿ ಅವರು ಸಬ್ ಕಮಿಟಿಗೆ ಅಧ್ಯಕ್ಷರಾಗಿ ಮಾಡಿರುವ ಬಡವರ ರಕ್ತ ಕುಡಿಯುವ ಕೆಲಸ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 3 ವರ್ಷ ಆದರೂ ಒಂದೇ ಒಂದು ಹೊಸ ಮನೆಯನ್ನು ಮಂಜೂರು ಮಾಡಿ, ಕಟ್ಟಿಸಿಕೊಟ್ಟಿಲ್ಲ. ಈ ವರ್ಷ ಕಟ್ಟಿಸಿಕೊಡ್ತೀವಿ ಎಂದಿದ್ದಾರೆ, ಇದು ಚುನಾವಣಾ ವರ್ಷವಾದ್ದರಿಂದ ಎಷ್ಟು ಕಟ್ಟಿಸ್ತಾರೆ ಬಿಟ್ತಾರೆ ಹೇಳೋದು ಕಷ್ಟ. ನಮ್ಮ ಸರ್ಕಾರ ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿ ಜಮೀನು ಮಂಜೂರು ಮಾಡಿದ್ದೆವು. ನಂತರ ಆನ್ ಲೈನ್ ಮೂಲಕ ಅರ್ಜಿ ಕರೆದಿದ್ದೆವು. ಹಿಂದೆ ಅರ್ಜಿ ಹಾಕಿದ್ದವರು ತಮಗೆ ಮನೆ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು, ಆದರೆ ಈ ಸರ್ಕಾರ ಮತ್ತೆ ಅರ್ಜಿ ಕರೆದಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸರ್ಕಾರವೇ ಮನುವಾದಿಗಳಿಗೆ ಬೆಂಬಲ ನೀಡುವ ಕೆಲಸ ಮಾಡುತ್ತಿದೆ. ಅವರು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಬಾಹಿರ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಇಲ್ಲದೆ ಹೋದರೆ ಯಾರೂ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಬರಲ್ಲ ಎಂದು ನಾನು ಸದನದಲ್ಲಿ ಹೇಳಿದ್ದು. ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ಅಲ್ಪಸಂಖ್ಯಾತ ವ್ಯಾಪಾರಿಗಳಿಗೆ ನಿಷೇಧ ಮುಂತಾದವುಗಳನ್ನು ಸರ್ಕಾರವೇ ಹುಟ್ಟುಹಾಕಿತು. ದ್ವೇಷವನ್ನು ಹುಟ್ಟುಹಾಕಿದ್ದೇ ಈ ಸರ್ಕಾರದ ಸಾಧನೆ. ಬೊಮ್ಮಾಯಿ ಅವರ ಕಾಲದಲ್ಲಿ ಇದು ವ್ಯಾಪಕವಾಗಿ ನಡೆದಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಆರ್,ಎಸ್,ಎಸ್ ನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದರು, ಬೊಮ್ಮಾಯಿ ಅವರು ಸಂಪೂರ್ಣವಾಗಿ ಆರ್,ಎಸ್,ಎಸ್ ಕಪಿಮುಷ್ಟಿಯಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಅಧಿಕಾರಕ್ಕೆ ಬಂದ 3 ವರ್ಷಗಳ ಆಯ್ತು. 2018ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 10% ಕೂಡ ಇಲ್ಲ. 5 ವರ್ಷಗಳಲ್ಲಿ 150 ಲಕ್ಷ ಕೋಟಿ ರೂ. ಗಳನ್ನು ನೀರಾವರಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಇಲ್ಲಿಯವರೆಗೆ 50,000 ಕೋಟಿಯನ್ನೂ ಖರ್ಚು ಮಾಡಿಲ್ಲ. ಇದೇ ರೀತಿ ತಾವು ಹೇಳಿದ್ದ ಭರವಸೆಗಳನ್ನು ಈಡೇರಿಸುವ ಪ್ರಯತ್ನವನ್ನೇ ಮಾಡಿಲ್ಲ.
ಈ ಸರ್ಕಾರ ಜನರಿಗೆ ದ್ರೋಹ ಎಸಗಿದೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಈ ಮಾತನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅವರು ಈ ಸರ್ಕಾರದ ಅಡಿ ಗುತ್ತಿಗೆ ಕೆಲಸಗಳನ್ನು ಮಾಡಲು ಆಗುತ್ತಿಲ್ಲ, ನಮ್ಮಿಂದ 40% ಕಮಿಷನ್ ಕೇಳುತ್ತಿದ್ದಾರೆ, ನೀವೆ ಏನಾದ್ರೂ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿಗಳಿಗೆ ಪತ್ರ ಬರೆದು 1 ವರ್ಷ ಆಗಿದೆ, ಆದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಇದು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಷ್ಟು ಅಂಕ ಕೊಡುತ್ತೀರ ಎಂದು ಕೆಲವರು ನನ್ನನ್ನು ಕೇಳಿದರು, ಅದಕ್ಕೆ ನಾನು ಸೊನ್ನೆ ಮಾತ್ರ ಕೊಡಲು ಸಾಧ್ಯ ಎಂದೆ. ಪಿಎಸ್ಐ ಹಗರಣದಲ್ಲಿ ಐಪಿಎಸ್ ಆಫೀಸರ್ ಬಂಧನವಾಗಿದೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಐಎಎಸ್, ಐಪಿಎಸ್ ದರ್ಜೆಯ ಅಧಿಕಾರಿಗಳ ಬಂಧನವಾದದ್ದು ಇದೇ ಮೊದಲು. ಅಂದರೆ ಭ್ರಷ್ಟಾಚಾರ ಯಾವ ಮಟ್ಟಿಗೆ ಇದೆ ಎಂದು ನೀವೆ ಅರ್ಥಮಾಡಿಕೊಳ್ಳಬೇಕು. ಇದೆಲ್ಲ ಮಂತ್ರಿಗಳು ಹಾಗೂ ರಾಜಕಾರಣಿಗಳ ಕುಮ್ಮಕ್ಕು ಇಲ್ಲದೆ ನಡೆಯಲು ಸಾಧ್ಯವೇ? ಇಡೀ ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಇಲ್ಲದೆ ಹೋದರೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ಮಾಡಿಸಿ. ಇಲ್ಲದಿದ್ದರೆ ಸತ್ಯ ಹೊರಬರಲ್ಲ. ಆದರೆ ಬೊಮ್ಮಾಯಿ ಅವರು ಇದನ್ನು ಮುಚ್ಚಿಹಾಕಲು ಯತ್ನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.