ಸಾಧನಾ ಸಮಾವೇಶವಲ್ಲ, ‘ಬಿಜೆಪಿ ಸರಕಾರದ ಭ್ರಷ್ಟೋತ್ಸವ’: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಕರ್ನಾಟಕ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದ್ದು, ಕೇವಲ ಒಂದು ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವುದು ಯಾಕೆ? ಇದು ಸಾಧನಾ ಸಮಾವೇಶವಲ್ಲ, ಇದು ‘ಬಿಜೆಪಿ ಸರಕಾರದ ಭ್ರಷ್ಟೋತ್ಸವ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

- Advertisement -

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕ ಹಾಗೂ ಬೆಂಗಳೂರು ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಇದೇ ಬಿಜೆಪಿ ಸರ್ಕಾರದ ಸಾಧನೆ. ಈ ಸರ್ಕಾರ ನಿಜಕ್ಕೂ ಸಾಧನೆ ಮಾಡಿದ್ದರೆ, ಪ್ರಧಾನ ಮಂತ್ರಿಗಳು, ಕೇಂದ್ರ ಹಣಕಾಸು ಸಚಿವರು ಸೇರಿದಂತೆ ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸರ್ಕಾರದ ಬೆನ್ನುತಟ್ಟಿ ಹೋಗುತ್ತಿದ್ದರು ಎಂದು ಹೇಳಿದರು.

ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾರಿಗೆ ನೆರವಾಗಿದೆ? ರೈತರ ಆದಾಯ ಡಬಲ್ ಮಾಡುವುದಾಗಿ ಮಾತು ಕೊಟ್ಟಿದ್ದರು. ಯಾವ ವಿಚಾರದಲ್ಲಿ ರೈತರ ಆದಾಯ ಡಬಲ್ ಆಗಿದೆ? ಹಾಲಿನ ಆದಾಯದಲ್ಲಿ ಡಬಲ್ ಆಗಿದೆಯಾ? ರೈತರು ಬೆಳೆದ ಬೆಳೆಗೆ ಡಬಲ್ ಬೆಲೆ ಸಿಗುತ್ತಿದೆಯಾ? ಇಲ್ಲ. ಆದರೆ ರೈತರು ಖರೀದಿ ಮಾಡುವ ರಸಗೊಬ್ಬರ, ಕೀಟನಾಶಕ ಹಾಗೂ ಇತರೆ ಔಷಧಿ ದರ ಡಬಲ್ ಆಗಿವೆ. ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಿ ಇತಿಹಾಸ ನಿರ್ಮಿಸಿದೆ. ಈ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಅನುಕೂಲ ಆಗಿಲ್ಲ. ಕೊರೋನಾ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ಅವರು 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು.

- Advertisement -

ಅದರಿಂದ ಯಾರಿಗೆ ಉಪಯೋಗವಾಗಿದೆ ಎಂಬ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು.
ಇನ್ನು ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಎಷ್ಟು ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂಬ ಪಟ್ಟಿಯನ್ನು ನೀಡಲಿ. ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಪಿಎಸ್ಐ ನೇಮಕಾತಿ ಭ್ರಷ್ಟಾಚಾರದ ಬಗ್ಗೆ ನಮ್ಮ ನಾಯಕರು ಪ್ರಶ್ನಿಸಿದಾಗ ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸುಳ್ಳು ಹೇಳಿದರು. ನಮ್ಮ ನಾಯಕರು ಸಾಕ್ಷಿ, ಪುರಾವೆಗಳನ್ನು ಇಟ್ಟ ಬಳಿಕ ಅಕ್ರಮ ನಡೆದಿದೆ ಎಂದು ಕೆಲವರನ್ನು ಬಂಧಿಸಲಾಗಿದೆ. ಒಂದೇ ದಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಬಂಧನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೇಮಕಾತಿಯಲ್ಲಿ ಪ್ರಭಾವಿ ನಾಯಕರು ಭಾಗಿಯಾಗಿದ್ದು, ಹೀಗಾಗಿ ಯಾರಿಗೂ ಜಾಮೀನು ನೀಡಬಾರದು ಎಂದು ಪೊಲೀಸರೇ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದ ಕೆಲವರನ್ನು ತನಿಖೆ ಮಾಡದೆ ವಾಪಸ್ ಕಳುಹಿಸಿದ್ದರು. ಹೀಗೆ ವಾಪಸ್ ಕಳುಹಿಸಲು ಒತ್ತಡ ಹಾಕಿದ್ದು ಯಾರು? ಬಂಧಿತರಿಂದ ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದೀರಾ? ಯಾವುದು ಇಲ್ಲ ಎಂದು ಕಿಡಿಕಾರಿದರು.

ಭ್ರಷ್ಟಾಚಾರದ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನ ಮಂತ್ರಿಗಳಿಗೆ ದೂರು ನೀಡಿದರೂ ಅವರ ತನಿಖೆ ಯಾಕೆ ಮಾಡಲಿಲ್ಲ? ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ 40% ಕಮಿಷನ್ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರ ವಿಚಾರಣೆ ಯಾಕೆ ನಡೆಸಲಿಲ್ಲ? ಸಂತೋಷ್ ಪಾಟೀಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾನೆ ಎಂದು ಹೇಳಿದ ಸಚಿವರಿಂದ ಮಾಹಿತಿ ಯಾಕೆ ಸಂಗ್ರಹಿಸಲಿಲ್ಲ? ಈ ಪ್ರಕರಣ ತನಿಖೆಯಾಗುವ ಮುನ್ನವೇ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಗೃಹ ಸಚಿವರು ಎಲ್ಲರೂ ಕ್ಲೀನ್ ಚಿಟ್ ನೀಡಿದರು. ಹೀಗಿರುವಾಗ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲು ಹೇಗೆ ಸಾಧ್ಯ? ಈ ಸರ್ಕಾರ ಆರೋಪಿಯನ್ನು ನಿರ್ದೋಷಿ ಎಂದು ಸಾಬೀತುಪಡಿಸುವಲ್ಲಿ ಶ್ರಮವಹಿಸಿದೆ. ಇದಕ್ಕೆ ಸರ್ಕಾರವನ್ನು ಅಭಿನಂದಿಸಬೇಕು ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಶಿಕ್ಷಣ ವಿಚಾರವಾಗಿ ಮಾತನಾಡುವುದಾದರೆ, ಈ ಸರ್ಕಾರ ಅಪಮಾನಿಸದ ಯಾವ ಗಣ್ಯ ವ್ಯಕ್ತಿ ಉಳಿದಿದ್ದಾರೆ? ಬಾಬಾ ಸಾಹೇಬ್ ಅಂಬೇಡ್ಕರ್, ಕೆಂಪೇಗೌಡ, ನಾರಾಯಣ ಗುರು, ಬಸವಣ್ಣ, ಕುವೆಂಪು, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಭಗತ್ ಸಿಂಗ್ ಸೇರಿದಂತೆ ದೇಶ ಪ್ರೇಮಿಗಳನ್ನು ಬಿಡದೆ ಎಲ್ಲರಿಗೂ ಈ ಸರ್ಕಾರ ಅಪಮಾನ ಮಾಡಿದೆ. ಮಹನೀಯರ ಸಿದ್ದಾಂತದ ಮೇಲೆ ಈ ಸರ್ಕಾರ ದಾಳಿ ನಡೆಸಿ ಎಲ್ಲಾ ಸಮುದಾಯದ ಜನರ ಹೃದಯದ ಮೇಲೆ ಗಾಯ ಮಾಡಿದೆ. ಇದು ಸರ್ಕಾರದ ಸಾಧನೆಯೆ? ಎಂದು ಅವರು ಪ್ರಶ್ನಿಸಿದರು.

ಈ ನಾಡು ನುಡಿ ಸಂಸ್ಕೃತಿ ಪರಂಪರೆ ಎಲ್ಲಾ ವಿಚಾರದಲ್ಲೂ ಹಸ್ತಕ್ಷೇಪ ಮಾಡಿತ್ತು. ವಿಶ್ವದ ಬಂಡವಾಳ ಹೂಡಿಕೆ ಕೇಂದ್ರವಾಗಿದ್ದ ಬೆಂಗಳೂರಿಗೆ ಯಾವುದೇ ಉದ್ದಿಮೆಗಳು ಬರುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಉದ್ಯಮಿಗಳು ಶಿವಮೊಗ್ಗ, ಮಂಗಳೂರಿನಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತವೆ? ಇದು ಈ ಸರ್ಕಾರದ ಸಾಧನೆಯ ಪಟ್ಟಿ. ರಾಜ್ಯದಲ್ಲಿ ನೆರೆ ಬಂದಾಗ ಮುಖ್ಯಮಂತ್ರಿಗಳು ಅವರ ಮಂತ್ರಿಗಳನ್ನು ಆಯಾ ಜಿಲ್ಲೆಗೆ ಕಳುಹಿಸಿ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ಸಚಿವರುಗಳು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಯಿತು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಈ ಸರ್ಕಾರ ಏನು ಮಾಡಿತು. ಈ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗಂಗಾ ಕಲ್ಯಾಣ ಯೋಜನೆಯನ್ನು ಭ್ರಷ್ಟಾಚಾರ ನಡೆಸಿದೆ. ಆದರೂ ಈ ವಿಚಾರವಾಗಿ ಯಾರನ್ನು ಬಂಧಿಸಿಲ್ಲ ಎಂದು ಶಿವಕುಮಾರ್ ಹೇಳಿದರು.

Join Whatsapp