ಹಾಸನ: ನಗರದ ವಿವಿಧೆಡೆ ರಾತ್ರಿ ವೇಳೆ ಕುಡಿದು, ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಪುಂಡರಿಗೆ ಎಸ್ಪಿ ಹರಿರಾಂ ಶಂಕರ್ ಬಿಸಿ ಮುಟ್ಟಿಸಿದ್ದಾರೆ.
ಕಳೆದ ರಾತ್ರಿ 8.30 ರಿಂದ 10.30 ರ ಸುಮಾರಿಗೆ ಪೆನ್‌ಶೆನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಉದಯಭಾಸ್ಕರ್, ಇನ್ಸ್ಪೆಕ್ಟರ್ ರೇಣುಕಾಪ್ರಸಾದ್, ಪಿಎಸ್‌ಐ ಹಾಗೂ ಸಿಬ್ಬಂದಿ ಸುಮಾರು 68 ಜನರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಜಿಲ್ಲೆಯಲ್ಲಿ ರಾತ್ರಿ ವೇಳೆ ಮದ್ಯಪಾನ ಮಾಡಿ ಸಾರ್ವಜನಿಕರು, ಮಹಿಳೆಯರಿಗೆ ತೊಂದರೆ ಕೊಡುವುದು, ಸಿಗರೇಟ್ ಸೇದುವುದು, ಮಟ್ಕಾ ದಂಧೆ ಆಡಿಸುವುದು, ವ್ಹೀಲಿಂಗ್ ಮಾಡುವುದು ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ, 68 ಮಂದಿಯನ್ನು ಹಿಡಿದು ಅವರನ್ನು ಪೊಲೀಸ್ ಸಮುದಾಯ ಭವನದಲ್ಲಿ ಕೂರಿಸಿ ಮುನ್ನೆಚ್ಚರಿಕೆಯ ಪಾಠ ಮಾಡಿದೆ.
ಈ ವೇಳೆ ಮಾತನಾಡಿದ ಎಸ್ಪಿ ಹರಿರಾಂ ಶಂಕರ್, ರಾತ್ರಿ 8 ಗಂಟೆ ನಂತರ ಎಲ್ಲೆಂದರಲ್ಲಿ ಮನಸೋ ಇಚ್ಛೆ ತಿರುಗಾಡುವುದು, ಸಿಗರೇಟ್ ಸೇದುವುದು, ತ್ರಿಬಲ್ ರೈಡ್ ಹಾಗೂ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ನಿಮ್ಮನ್ನು ಕರೆ ತಂದು ಕೂರಿಸಲಾಗಿದೆ. ಈ ರೀತಿಯ ವರ್ತನೆ ಹೀಗೇ ಮುಂದುವರಿದರೆ ನಿಮ್ಮನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗವುದು, ಅಷ್ಟೇ ಅಲ್ಲ ನಿಮ್ಮ ಕ್ರಿಮಿನಲ್ ಹಿಸ್ಟರಿ ಚೆಕ್ ಮಾಡಲಾಗುವುದು. ಮದ್ಯ ಮತ್ತು ಗಾಂಜಾ ಸೇವನೆ ಪರೀಕ್ಷೆ ಮಾಡಿಸಲಾಗುವುದು ಎಂದು ಖಡಕ್ ವಾರ್ನಿಂಗ್ ಮಾಡಿದರು.
ಯಾರೂ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದೇ ನಿಮ್ಮ ಜೀವನ ಕ್ರಮಗಳಲ್ಲಿ ಸುಧಾರಣೆ ತಂದುಕೊಳ್ಳಬೇಕು. ಅದು ನಿಮಗೇ ಒಳ್ಳೆಯದು.ಕುಡಿದೋ, ಮತ್ತಾವುದೋ ಕಾರಣದಿಂದ ಅಪಘಾತ ಮಾಡಿಕೊಂಡರೆ ಅದರಿಂದ ನಿಮಗೆ, ನಿಮ್ಮ ಕುಟುಂಬದವರಿಗೇ ನಷ್ಟ. ಹಾಗಾಗದಂತೆ ಎಚ್ಚರ ವಹಿಸಿ ಎಂದು ಬುದ್ಧಿಮಾತು ಹೇಳಿದರು.
ಈಗ ವಾರ್ನಿಂಗ್ ಮಾಡಿದ್ದೇವೆ. ನಿಮ್ಮ ಬಗ್ಗೆ ರೆಕಾರ್ಡ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಏರಿಯಾದಲ್ಲಿ ಸರಕಳ್ಳತನ, ಗಲಾಟೆ ಇತ್ಯಾದಿ ಏನೇ ಪ್ರಕರಣ ನಡೆದರೂ ಮೊದಲು ನಿಮ್ಮನ್ನೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದರು.
ಅದು ಬೇಡ ಎಂದರೆ ನೀವು ಈಗಿನಿಂದಲೇ ಸುಧಾರಣೆ ಆಗಬೇಕು. ಸಂಜೆ ಕೆಲಸ ಮುಗಿಸಿದ ನಂತರ ನೇರವಾಗಿ ಮನೆಗೆ ಹೋಗಬೇಕು. ಅದನ್ನು ಬಿಟ್ಟು ಎಣ್ಣೆ ಹೊಡೆಯೋದು, ಸಿಗರೇಟ್ ಸೇದಿ ಜನರಿಗೆ ಕಿರಿಕಿರಿ ಮಾಡುವುದು ಮರುಕಳಿಸಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದರು. ಬೇಡವಾದ ಚಟುವಟಿಕೆಗಳ ಮೂಲಕ ಯಾರಿಗೂ ತೊಂದರೆ ಕೊಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ಜಿಲ್ಲೆಯಲ್ಲಿ ರಾತ್ರಿ ವೇಳೆ ಸುಮ್ಮನೇ ತಿರುಗಾಡುವುದು, ಡ್ರಿಂಕ್ಸ್ ಮಾಡಿ ಜನರಿಗೆ ಉಪಟಳ ನೀಡುವುದು, ಮಟ್ಕಾ ದಂಧೆಯಲ್ಲಿ ಭಾಗಿಯಾಗುತ್ತಿರುವ ನಾನು ಜಿಲ್ಲೆಗೆ ಬಂದ ಆರಂಭದಲ್ಲೇ ಸಾರ್ವಜನಿಕ ದೂರು ಕೇಳಿ ಬಂದಿತ್ತು. ಆ ಹಿನ್ನೆಲೆ ಡಿವೈಎಸ್ಪಿ ನೇತೃತ್ವದಲ್ಲಿ ಇಲಾಖೆಯ ಸುಮಾರು 60 ಮಂದಿಯ ತಂಡ, ಪೆನ್‌ಶೆನ್ ಮೊಹಲ್ಲಾ ಏರಿಯಾದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದೆ. 68 ಮಂದಿಯಲ್ಲಿ ಒಬ್ಬ ಮಟ್ಕಾ ಆರೋಪಿ ಸಿಕ್ಕಿ ಬಿದ್ದಿದ್ದು, ಆತನಿಂದ 30 ಸಾವಿರ ನಗದು, 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಹೆಲ್ಮೆಟ್ ಇಲ್ಲದೆ ತ್ರಿಬ್ಬಲ್ ರೈಡಿಂಗ್ ಮಾಡುತ್ತಿದ್ದವರನ್ನೂ ಕರೆತರಲಾಗಿದೆ. ಉಳಿದವರಿಗೆ ಕೆಪಿಎ ಆಕ್ಟ್ ಸೆಕ್ಷನ್ 92 ರಲ್ಲಿ ಕೇಸು ದಾಖಲಿಸಿ ವಾರ್ನಿಂಗ್ ಮಾಡಿದ್ದೇವೆ. ಎಲ್ಲರ ಹೆಸರು, ವಿವರ ಪಡೆದಿದ್ದೇವೆ. ಈ ರೀತಿಯ ಕಾರ್ಯಾಚರಣೆ ಎಲ್ಲಾ ಕಡೆ ನಿರಂತರವಾಗಿ ಮುಂದುವರಿಯಲಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರ, ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಸೇಫ್ ಆಗಿರಬೇಕು ಎಂಬುದು ನಮ್ಮ ಉದ್ದೇಶ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.