ಹಾಸನ: ಬ್ರಾಹ್ಮಣೀಕರಣಗೊಂಡ ಪರಿಷ್ಕೃತ ಪಠ್ಯಪುಸ್ತಕಗಳ ಜಲಸಮಾಧಿ

Prasthutha|

ಹಾಸನ: ಪರಿಷ್ಕರಣೆಯಿಂದಾಗಿ ಬ್ರಾಹ್ಮಣೀಕರಣಗೊಂಡ ಪರಿಷ್ಕೃತ ಪಠ್ಯಗಳನ್ನು ಹಾಸನದ ಎನ್.ಆರ್.ವೃತ್ತದಲ್ಲಿ ಕೆಸರು ನೀರಿಗೆ ಮುಳುಗಿಸಿ ಜಲಸಮಾಧಿ ಮಾಡುವ ಮೂಲಕ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಕರ್ನಾಟಕ ಮತ್ತು ಹಾಸನ ಜಿಲ್ಲಾ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

- Advertisement -

ಈ ಸಂದರ್ಭದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಎನ್.ಎಲ್. ಮುಕುಂದರಾಜ್ ಅವರು ಕಳೆದ ಎರಡು ತಿಂಗಳುಗಳಿಂದ ರಾಜ್ಯಾದ್ಯಂತ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಕಿವಿಕೊಡುತ್ತಿಲ್ಲ. ಇದರ ಪಂಚೇಂದ್ರಿಯಗಳು ನಾಶವಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಅಹವಾಲುಗಳನ್ನು ಕೇಳಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಇದು ನಾಚಿಕೆಗೆಟ್ಟ ಬಂಡ ಸರ್ಕಾರ. ಆದ್ದರಿಂದಲೇ ನಾವು ಮತದಾರ ಪ್ರಭುಗಳ ಬಳಿ‌ ಹೋಗುತ್ತಿದ್ದೇವೆ. ಜೊತೆಗೆ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಗಳನ್ನು ಜಲಸಮಾಧಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಈಗಾಗಲೇ ಶಾಲಾ ಮಕ್ಕಳಿಗೆ ವಿತರಿಸಿರುವ ಈ ಪುಸ್ತಕಗಳು ವಿಷಪಾತಕ ಪುಸ್ತಕಗಳು. ಇದನ್ನು ಓದಿದರೆ ಮಕ್ಕಳು ಉದ್ದಾರ ಆಗಲ್ಲ. ನಮ್ಮ ಸಂಸ್ಕೃತಿ ನಾಶವಾಗುತ್ತದೆ. ದೇಶದ ಚರಿತ್ರೆ ಹಾಳಾಗುತ್ತದೆ. ಜನ ಎಲ್ಲವನ್ನೂ ತಪ್ಪಾಗಿ ಭಾವಿಸುವ ಸಾಧ್ಯತೆ ಇದ್ದು, ಈ ಪುಸ್ತಕಗಳು ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಬಾಬಾ ಸೇಹೇಬ್ ಅಂಬೇಡ್ಕರ್ ರವರು ಹಿಂದೆ ಮನುಧರ್ಮ ಶಾಸ್ತ್ರವನ್ನು ಬಹಿರಂಗವಾಗಿ ಸುಟ್ಟಿದ್ದರು. ಆದರೆ ನಾವು ಈ ಪುಸ್ತಕಗಳನ್ನು ಕೆಸರಿನ ನೀರಿನಲ್ಲಿ ಮುಳುಗಿಸಿ ಜಲಸಮಾಧಿ ಮಾಡಿದ್ದೇವೆ. ಹಾಸನ ಜಾತ್ಯಾತೀತ ಪ್ರಜ್ಞೆಯ ಜನರಿರುವ ಜಿಲ್ಲೆ. ಇಲ್ಲಿ ಕೋಮುವಾದಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶದಿಂದ ಈ ವಿನೂತನ ಹೋರಾಟಕ್ಕೆ ಇಲ್ಲಿಂದಲೇ ಚಾಲನೆ ನೀಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಸರ್ಕಾರ ತನ್ನ ತಪ್ಪುಗಳನ್ನು ತಾಂತ್ರಿಕವಾಗಿ ಒಪ್ಪಿಕೊಂಡಿದೆ. ಆದರೂ ಮತ್ತದೇ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಇದು ಅಯೋಗ್ಯ ಸರ್ಕಾರ, ಅಯೋಗ್ಯ ಶಿಕ್ಷಣ ಸಚಿವ. ಬೆನ್ನುಮೂಳೆ ಇಲ್ಲದ ಮುಖ್ಯ ಮಂತ್ರಿ. ಇವರು ಈ ಪುಸ್ತಕಗಳ ಮೂಲಕ ಎಂತಹ ಪ್ರಜೆಗಳನ್ನು ಸೃಷ್ಟಿಸುತ್ತಾರೆ. ಬ್ರಾಹ್ಮಣ್ಯ ಮತ್ತು ಆರ್.ಎಸ್.ಎಸ್ ನ್ನು ದೇಶದದಿಂದ ಹೊಡೆದು ಓಡಿಸದೇ ಇದ್ದರೆ ದೇಶಕ್ಕೆ ಉಳಿಗಾಲ ಇಲ್ಲ. ಶಿಕ್ಷಣ ಮಂತ್ರಿಯನ್ನು ಕೂಡಲೇ ವಜಾಗೊಳಿಸಬೇಕು. ಬೆನ್ನೆಲುಬಿಲ್ಲದ ಮುಖ್ಯಮಂತ್ರಿ ಸಂಘಪರಿವಾರದ ಕೈಗೊಂಬೆಯಾಗಿದ್ದಾರೆ. ಸಂವಿಧಾನದ ಮೌಲ್ಯಗಳು ಉಳಿಯದೇ ಭಾರತವನ್ನು ಉಳಿಸಲು ಸಾಧ್ಯವಿಲ್ಲ. ಆರ್ ಎಸ್ ಎಸ್ ನ ಹಿಂದುತ್ವ ರಾಷ್ಟ್ರವನ್ನು ನಿರ್ಮಾಣ ಮಾಡಲು ಇಂತಹ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿದ್ದು, ಭಾರತವನ್ನು ಮನುರಾಷ್ಟ್ರವನ್ನಾಗಿ ಮಾಡಲು ನಾವು  ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ವಂದೇ ಮಾತರಂನ ಧರ್ಮರಾಜ್ ಕಡಗ, ದಲಿತ ಮುಖಂಡರುಗಳಾದ ರಾಜಶೇಖರ್, ವಿಜಯಕುಮಾರ್ ದಂಡೋರ, ಎಂ.ಜಿ.ಪೃಥ್ವಿ, ಕೆ.ಪಿ.ಆರ್.ಎಸ್ ನ ನವೀನ್ ಕುಮಾರ್, ವಸಂತ್ ಕುಮಾರ್ ಅಕ್ಮಲ್ ಜಾವೇದ್ ಮುಂತಾದವರು ಭಾಗವಹಿಸಿದ್ದರು.



Join Whatsapp