ಅರಸೀಕೆರೆ: ತಾಲೂಕಿನಲ್ಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಹಾಗೂ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಅವರ ನಡುವಿನ ರಾಜಕೀಯ ಸಂಘರ್ಷ ಮುಂದುವರಿಯುತ್ತಲೇ ಇದ್ದು, ತಾಲೂಕಿನ ಡಿಎಂ ಕುರ್ಕೆ ಗ್ರಾಮದಲ್ಲಿ ಶಾಸಕರ ಎದುರೇ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಶುಕ್ರವಾರ ಶಾಸಕರ ಎದುರೇ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವಿನ ಹೊಡೆದಾಟದಲ್ಲಿ ಎರಡೂ ಕಡೆಯ ಕೆಲವರು ಸಣ್ಣಪುಟ್ಟ ಗಾಯಗಳಾಗಿದ್ದು, ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.
ಡಿಎಂ ಕುರ್ಕೆ ಗ್ರಾಮದಲ್ಲಿ ಹೇಮಾವತಿ ಪೈಪ್‌ಲೈನ್ ಏತ ನೀರಾವರಿ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಭೂಮಿ ಪೂಜೆ ವೇಳೆ ನಡೆಸುತ್ತಿದ್ದರು. ಭೂಮಿ ಪೂಜೆ ವೇಳೆ ಜೆಡಿಎಸ್ ಮುಖಂಡರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಅಪಸ್ವರ ಎತ್ತಿದರು.
ಅಲ್ಲದೆ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಎರಡೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ನೋಡ ನೋಡುತ್ತಿದ್ದಂತೆಯೇ ಕೈಕೈ ಮಿಲಾಯಿಸಲು ಮುಂದಾದರು. ಕೆಲವರು ಕಾರ್ಯಕ್ರಮಕ್ಕೆಂದು ಹಾಕಿದ್ದ ಕುರ್ಚಿಗಳನ್ನು ಮನಬಂದಂತೆ ಎಸೆದಾಡಿದರು.ಕೆಲವರು ಹೊಡೆದಾಟ ಶುರುವಾಗುತ್ತಿದ್ದಂತೆಯೇ ಅಲ್ಲಿಂದ ಓಡಿ ಬಾಳೆಹಣ್ಣು ಅಂಗಡಿ ಇತ್ಯಾದಿ ಕಡೆ ಅಡಗಿಕೊಳ್ಳಲು ಹೋದರೂ ಬಿಡದೆ ಅಟ್ಟಾಡಿಸಿಕೊಂಡು ಹಲ್ಲೆ ಮಾಡಲು ತೊಡಗಿದರು. ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತ ರಾಂಪುರದ ಸುರೇಶ್ ಎಂಬುವರ ಬಲಗೈ ಮುರಿದಿದೆ ಎನ್ನಲಾಗಿದೆ.
ಗಾಯಾಳುಗಳ ಪೈಕಿ ಕೆಲವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಗಾಯಗೊಂಡವರಿಗೆ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹಾಸನ ಜಿಲ್ಲಾಸ್ಪತ್ರೆ ಕಳಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.