ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬೇಡಿ: ಸರ್ಕಾರಕ್ಕೆ ಹೈಕೋರ್ಟ್‌ ಖಡಕ್ ಆರ್ಡರ್

Prasthutha|

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಂತಹ (ಎಸಿಬಿ) ಪ್ರತಿಷ್ಠಿತ ಸಂಸ್ಥೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬೇಡಿ ಎಂದು ಹೈಕೋರ್ಟ್, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ಕೊಟ್ಟಿದೆ.

- Advertisement -

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗೆ ಈ ನಿರ್ದೇಶನ ನೀಡಿದೆ.

ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಗಮನಿಸಬೇಕು. ಭ್ರಷ್ಟಾಚಾರ ತಡೆಯಲೆಂದೇ ರಚಿಸಲಾಗಿರುವ ಎಸಿಬಿ ಅಧಿಕಾರಿ ಆಗುವವರು ಸಾಕಷ್ಟು ವಿಶ್ವಾಸಾರ್ಹತೆ ಹೊಂದಿರಬೇಕು. ಸಂಸ್ಥೆಯ ಘನತೆಯನ್ನು ಉನ್ನತ ಹಂತಕ್ಕೆ ಒಯ್ಯುವಂತಹ ಕ್ಷಮತೆ ಉಳ್ಳವರಾಗಿರಬೇಕು.

- Advertisement -

ಆದ್ದರಿಂದ, ಎಸಿಬಿಯಂತಹ ಸಂಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸೇವಾ ದಾಖಲೆ ಹಾಗೂ ಸಮಗ್ರತೆಯನ್ನು ಪರಿಗಣಿಸ ಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅಧಿಕಾರಿಗಳ ನೇಮಕಾತಿಯನ್ನು ಯಾವುದೇ ಒತ್ತಡಗಳಿಗೂ ಒಳಗಾಗದೆ ಮಾಡಬೇಕು. ನೇಮಕದ ಹಿಂದೆ ಆಂತರಿಕ ಅಥವಾ ಬಾಹ್ಯ ಪ್ರಭಾವಗಳು ಇರಬಾರದು. ನೇಮಕ ಹೊಂದುವ ಅಧಿಕಾರಿಯ ವಿರುದ್ಧ ಎಸಿಬಿ ಅಥವಾ ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು. ಅವರ ಕುಟುಂಬ ಸದಸ್ಯರ ವಿರುದ್ಧವೂ ಯಾವುದೇ ತನಿಖೆ ನಡೆಯುತ್ತಿರಬಾರದು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವೇ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಡಿಪಿಎಆರ್ ಕಾರ್ಯದರ್ಶಿಗೆ ನ್ಯಾಯ ಪೀಠ ಖಡಕ್ ವಾರ್ನಿಂಗ್ ನೀಡಿದೆ.



Join Whatsapp