ಕೊಡಗು : ಭೂಕಂಪ ಹಿನ್ನೆಲೆ; ಹೆಲ್ಪ್ ಲೈನ್ ನಂಬರ್ ಬಿಡುಗಡೆಗೊಳಿಸಿದ ವಿಪತ್ತು ನಿರ್ವಹಣಾ ಕೇಂದ್ರ

Prasthutha|

ಮಡಿಕೇರಿ: ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಕೊಡಗಿನಲ್ಲೇ ಇರುವುದಾಗಿ ತಿಳಿದುಬಂದಿದೆ‌.

- Advertisement -

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 3.0ಯಷ್ಟು ಭೂಕಂಪನ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ‌ ಕೇಂದ್ರ ತಿಳಿಸಿದೆ.

ಈ ಭೂಕಂಪನದಲ್ಲಿ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಆದರೆ, ಹಲವು ಸೆಕೆಂಡ್’ಗಳಷ್ಟು ಸಮಯ ಕಂಪನದ ಅನುಭವವಾಗಿದ್ದು, ಸುಮಾರು 50 ಕಿ.ಮೀ ಪ್ರದೇಶದವರೆಗೂ ಅನುಭವವಾಗಿರುವ ಸಾಧ್ಯತೆ ಇದೆ. ಆದರೆ, ಈ ಕಂಪನದಿಂದ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ‌ ವಸ್ತುಗಳು ಅಲುಗಾಡಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

- Advertisement -

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, 5 ಸೆಕೆಂಡ್’ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸಾಕಷ್ಟು ಕಡೆಗಳಿಂದ ಜನರು ಮಾಹಿತಿ ನೀಡಿದ್ದಾರೆ. ವಿಷಯವನ್ನು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಗಮನಕ್ಕೆ ತರಲಾಗಿದೆ‌. ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ ದತ್ತಾಂಶಗಳ ಪರಿಶೀಲನೆ ನಡೆದಿದೆ. ಆ ಬಳಿಕ ಕಂಪನದ ತೀವ್ರತೆ  ಗೊತ್ತಾಗಲಿದೆ. ಸದ್ಯಕ್ಕೆ ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಭೂಕಂಪದ ಅನುಭವವಾದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರ 08272-221077, 221099 ಕರೆ ಮಾಡಿ ಮಾಹಿತಿ ಕೊಡಬೇಕೆಂದು ಮನವಿ ಮಾಡಲಾಗಿದೆ.



Join Whatsapp