ಮುಂಬೈ: ಒಂದು ಕಡೆ ಬಂಡಾಯಗಾರ ಏಕನಾಥ ಶಿಂಧೆ ಸೋಲುವುದಿಲ್ಲ ಎಂದರೆ ಇನ್ನೊಂದು ಕಡೆ ಶಿವಸೇನೆ ಮೈತ್ರಿ ಸರಕಾರ ಉಳಿಸಲು ಓಡಾಡುತ್ತಿರುವ ಸಂಜಯ್ ರಾವುತ್, ಸೋಲುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದರ ನಡುವೆ ಏಕನಾಥ ಶಿಂಧೆ ಗುವಾಹತಿಯಿಂದ ಮುಂಬಯಿಯತ್ತ ಹೊರಟಿದ್ದಾರೆ.
ಕಳೆದ ರಾತ್ರಿ ಏಕನಾಥ ಶಿಂಧೆಯವರ ಪರ 37 ಶಾಸಕರ ಸಹಿ ಇರುವ ಪತ್ರವನ್ನು ಸ್ಪೀಕರ್ ನರಹರಿ ಜರಿವಾಲ್ ರಿಗೆ ತಲುಪಿಸಿ ನಾನೇ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.
ಶುಕ್ರವಾರ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು, ಇದರಲ್ಲಿ ನಾವು ಸೋಲುವ ಪ್ರಶ್ನೆಯೂ ಇಲ್ಲ, ನಮ್ಮ ಸರಕಾರ ಬೀಳುವುದೂ ಇಲ್ಲ. ಬಂಡಾಯ ಶಾಸಕರೆಲ್ಲರೂ ಮುಂಬೈಗೆ ಬರಲಿ ಆಮೇಲೆ ನೋಡೋಣ. ನಮ್ಮ ಸರಕಾರ ಪೂರ್ಣಾವಧಿ ಮುಗಿಸುತ್ತದೆ ಎಂದು ಹೇಳಿದ್ದಾರೆ.
ಇದರ ನಡುವೆ 400 ಮಾಜಿ ಕಾರ್ಪೊರೇಟರ್ ಗಳು, ಕೆಲವು ಸಂಸದರು ನಮ್ಮ ಕಡೆಗಿರುವುದಾಗಿ ಶಿಂಧೆ ಕಡೆಯವರು ಹೇಳಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಜಿಲ್ಲಾ ಅಧ್ಯಕ್ಷರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಶಿಂಧೆ ಬಣವು ಸಭಾಪತಿಗೆ ನೀಡಿದ ಪತ್ರದಲ್ಲಿ ಭರತ್ ಶೇಟ್ ಗೋಗವಾಲೆ ಮುಖ್ಯ ಸಚೇತಕ ಎಂದು ಹೆಸರಿಸಿದೆ. ವಿಚಿತ್ರವೆಂದರೆ ಪಕ್ಷಾಂತರ ನಿಷೇಧ ಮಸೂದೆ ಪಾರಾಗಲು ಬೇಕಾದ ನಿಶ್ಚಿತ 37 ಸಂಖ್ಯೆ ಮಂದಿ ಇದಕ್ಕೆ ಸಹಿ ಹಾಕಿದ್ದಾರೆ.
ಶಿಂಧೆ ಕಾನೂನಿನಂತೆ ನಡೆದುಕೊಳ್ಳದಿದ್ದರೆ ನಮ್ಮ ಕಾರ್ಯಕರ್ತರು ಬೀದಿಗಳಿದು ಇಂಥ ಲಾಡ್ಜ್ ವಾಸಿಗೆ ಮುತ್ತಿಗೆ ಹಾಕುವರು. ನಮ್ಮ ಸರಕಾರ ಪೂರ್ಣಾವಧಿ ಪೂರೈಸುವುದನ್ನು ಯಾರೂ ತಡೆಯಲಾರರು. ಕಾನೂನು ಹೋರಾಟ ಮತ್ತು ಬೀದಿ ಹೋರಾಟ ಎರಡೂ ನಡೆಯುವುದು ಎಂದು ರಾವುತ್ ಹೇಳಿದ್ದಾರೆ.