ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕೆಲವು ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೋಟಿಗಟ್ಟಲೆ ಡೀಲ್ ಮಾಡಿರಬಹುದು ಎಂದು ಜೆಡಿಎಸ್ ಯುವ ಮುಖಂಡ ಹಾಗೂ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಇಮ್ರಾನ್ ಪಾಷಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ನಾಯಕರು ಸಹಾನುಭೂತಿ ಪ್ರದರ್ಶಿಸುವ ನಾಟಕವಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ, ಸಮುದಾಯದ ಕಣ್ಣಿಗೆ ಮಣ್ಣೆರೆಚುವ ಕೆಲಸ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎಂದು ಅವರು ದೂರಿದರು.
ಸಿದ್ದರಾಮಯ್ಯನವರ ದ್ವಂದ್ವ ನೀತಿಯಿಂದಾಗಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೂರನೆ ಅಭ್ಯರ್ಥಿ ಗೆಲುವು ದಾಖಲಿಸಲು ಸಾಧ್ಯವಾಯಿತು ಅವರು ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಲ್ಲಿ ಮುಸ್ಲಿಮ್ ಯುವಕರು ಮೃತಪಟ್ಟರು. ಡಿ.ಜೆ.ಹಳ್ಳಿಯಲ್ಲಿ ಗಲಭೆ, ಹಿಜಾಬ್ ವಿವಾದ, ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಸೇರಿದಂತೆ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯಾವ ವಿಚಾರದ ಬಗ್ಗೆಯೂ ಸಿದ್ದರಾಮಯ್ಯ ಆಗಲಿ, ಕಾಂಗ್ರೆಸ್ ನಾಯಕರಾಗಿ ಗಟ್ಟಿಧ್ವನಿಯಾಗಿ ಮಾತನಾಡಲಿಲ್ಲ ಇಮ್ರಾನ್ ಪಾಷಾ ಆರೋಪಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೋಟಿಗಟ್ಟಲೆ ಡೀಲ್ ಮಾಡಿರಬಹುದು: ಇಮ್ರಾನ್ ಪಾಷಾ
Prasthutha|