ಬೆಂಗಳೂರು : ನಗರ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಶುಲ್ಕ ಏರಿಕೆ ಮತ್ತು ಅದರ ಸಂಗ್ರಹಣೆ ಜವಾಬ್ದಾರಿ ಬೆಸ್ಕಾಂಗೆ ನೀಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿದೆ.
ಕಸ ನಿರ್ವಹಣೆ ಶುಲ್ಕವನ್ನು ರೂ 200 ರಿಂದ 600 ಕ್ಕೆ ಹೆಚ್ಚಳ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡಲು ಹೊರಟಿದೆ ಹಾಗೂ ಈ ಶುಲ್ಕ ಸಂಗ್ರಹ ಜವಾಬ್ದಾರಿಯನ್ನು ಬೆಸ್ಕಾಂಗೆ ನೀಡುವ ಬಿಬಿಎಂಪಿಯ ಈ ತೀರ್ಮಾನವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ತೀರ್ಮಾನವನ್ನು ಹಿಂಪಡೆಯದಿದ್ದರೆ, ಬಿಬಿಎಂಪಿ ವಿಧಿಸುವ ಯಾವುದೇ ತೆರಿಗೆಗಳನ್ನು ಕಟ್ಟದೆ ಬೆಂಗಳೂರಿನಲ್ಲಿ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಬುಧವಾರ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ನಾಚಿಕೆಗೆಟ್ಟ ಸರ್ಕಾರ ಬಡವರನ್ನು ಸುಲಿದು ತಿನ್ನಲು ಹೊರಟಿದೆ, ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ, ನಂತರ ನೀರಿನ ಬಿಲ್ ಹೆಚ್ಚಳಕ್ಕೆ ಕೈ ಹಾಕಿದೆ, ಈಗ ಕಸ ನಿರ್ವಹಣೆಗೂ ಶುಲ್ಕ ಹೆಚ್ಚಳ ಮಾಡಿ ಅದನ್ನು ಹಿಂಬಾಗಿಲ ಮೂಲಕ ಜನರನ್ನು ಹೆದರಿಸಿ, ಬೆದರಿಸಿ ಬೆಸ್ಕಾಂ ಮೂಲಕ ಸಂಗ್ರಹಿಸಲು ಹೊರಟಿದೆ. ಈ ಜನ ವಿರೋಧಿ ನಡೆಯನ್ನು ಸಹಿಸುವುದಿಲ್ಲ ಎಂದು ಅವರು ತಿಳಿಸಿದರು. ಲಾಕ್ ಡೌನ್‌ನಿಂದ ಜನರ ಆದಾಯ ಶೇ 50ರಷ್ಟು ಕಡಿಮೆ ಆಗಿದೆ ಇಂತಹ ಹೊತ್ತಿನಲ್ಲಿ ಜನರ ಮೇಲೆ ಮತ್ತಷ್ಟು ಹೊರೆ ಹಾಕುವ ನಿರ್ಧಾರ ಬೇಕಿತ್ತೆ ಎಂದು ಅವರು ಪ್ರಶ್ನಿಸಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಈಗಾಗಲೇ ಜನರಿಂದ 45 ಕೋಟಿಯಷ್ಟು ಕಸದ ನಿರ್ವಹಣೆಗೆ ಎಂದು ಸೆಸ್ ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿಗಿಂತಲೂ ದೊಡ್ಡ ವಿಸ್ತೀರ್ಣದ ದೆಹಲಿ ನಗರದ ಕಸ ನಿರ್ವಹಣೆಗೆ ಅಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರ ವಾರ್ಷಿಕ ರೂ. 250 ಕೋಟಿ ಖರ್ಚು ಮಾಡುತ್ತಿದೆ. ಆದರೆ ಬಿಬಿಎಂಪಿ ಮಾತ್ರ ವರ್ಷಕ್ಕೆ ರೂ. 1200 ಕೋಟಿಗೂ ಅಧಿಕ ವೆಚ್ಚ ಅಂದರೆ ವಾರ್ಡ್ ಒಂದಕ್ಕೆ 6 ಕೋಟಿಯಷ್ಟು ಖರ್ಚು ಏಕೆ ಎಂದು ಮೊದಲು ಬಿಬಿಎಂಪಿ ಉತ್ತರಿಸಬೇಕು ಎಂದರು. ಈ ತೀರ್ಮಾನದ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಮುಂದುವರೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಉಸ್ತುವಾರಿ ರೋಮಿ ಭಾಟಿ, ಸಹ ಸಂಚಾಲಕ ವಿಜಯ್ ಶರ್ಮ, ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಫಣಿರಾಜ್.ಎಸ್.ವಿ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದ್ ಇದ್ದರು.