ಬೆಂಗಳೂರು: 50 ವರ್ಷಗಳಲ್ಲೇ ದಾಖಲೆಯ ಚಳಿ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 50 ವರ್ಷಗಳಲ್ಲೇ ಅತ್ಯಂತ ಚಳಿ  ದಾಖಲಾಗಿದ್ದು, ಮೇ ತಿಂಗಳಲ್ಲಿ ಎರಡನೇ ಬಾರಿಗೆ ಚಳಿ ದಿನ ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಗುರುವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ, ಮಳೆಯಿಂದ ಬೆಂಗಳೂರಿನ ಜನತೆಗೆ ಬೇಸಿಗೆಯಲ್ಲೂ ಮಳೆ, ಚಳಿಗಾಲದ ಅನುಭವವಾಗಿದೆ.

ಮೇ ತಿಂಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಗುರುವಾರ ಸಂಜೆ 5.30ರ ವೇಳೆಗೆ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡು 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

- Advertisement -

ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದ್ದು, 19.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 1972 ಮೇ 14 ರಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಎಂದು ದಾಖಲಾಗಿದ್ದ 22.2 ಡಿಗ್ರಿ ಸೆಲ್ಸಿಯಸ್ ಈವರೆಗಿನ ದಾಖಲೆಯಾಗಿತ್ತು.

ಕಳೆದ  24 ಗಂಟೆಗಳಲ್ಲಿ ಬೆಂಗಳೂರಿನ ತಾಪಮಾನ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮೇ 11 ರಂದು ನಗರದಲ್ಲಿ 24.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ ಹತ್ತು ವರ್ಷದಲ್ಲೇ ಬೆಂಗಳೂರಿನಲ್ಲಿ ದಾಖಲಾದ ಚಳಿ ದಿನವಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ದಾಖಲಿಸಿದ್ದು,

ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಅಸಾನಿ ಚಂಡಮಾರುತ ದುರ್ಬಲಗೊಂಡ ಪ್ರಭಾವದಿಂದಾಗಿ  ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗಲು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

“ಆಂಧ್ರ ಪ್ರದೇಶದ ಕರಾವಳಿ ಭಾಗದ ಮೇಲೆ ಅಪ್ಪಳಿಸಿದ ಅಸಾನಿ ಚಂಡಮಾರುತ ದುರ್ಬಲಗೊಳ್ಳುತ್ತಿದ್ದು, 31.48 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಅಸಾನಿ ಚಂಡ ಮಾರುತದ ಪ್ರಭಾವದಿಂದಾಗಿ ದೂರದ ಪ್ರದೇಶಗಳಲ್ಲೂ ವಾತಾವರಣದಲ್ಲಿ ಬದಲಾವಣೆಯಾಗಿದೆ. ಮೋಡ ಕವಿದ ವಾತಾವರಣ ಮತ್ತು ಚಳಿ ಗಾಳಿ ಬೀಸಿದ ಪರಿಣಾಮ ಈಶಾನ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ತಾಪಮಾನ ಕಡಿಮೆಯಾಗಿದ್ದು, ಮಳೆಯಾಗುತ್ತಿದೆ. ಮೇ 14ರವರೆಗೆ ಇದೇ ವಾತಾವರಣ ಮುಂದುವರೆಯಲಿದೆ” ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp