ಮತಾಂತರಗೊಂಡ ಪರಿಶಿಷ್ಟ ಜಾತಿ/ವರ್ಗಗಳಿಗೆ ಸರ್ಕಾರಿ ಸವಲತ್ತು, ಮೀಸಲಾತಿ ಸೌಲಭ್ಯ ರದ್ದು: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತ

Prasthutha|

ಬೆಂಗಳೂರು: ದಲಿತರು ದೌರ್ಜನ್ಯಕ್ಕೊಳಗಾಗಿ ಸಾವನ್ನಪ್ಪಿದ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಹಾಗೂ ಮತಾಂತರಗೊಂಡ ಪರಿಶಿಷ್ಟ ಜಾತಿ/ವರ್ಗಗಳಿಗೆ ಸರ್ಕಾರಿ ಸವಲತ್ತುಗಳು ಮತ್ತು ಮೀಸಲಾತಿ ಸೌಲಭ್ಯ ರದ್ದುಪಡಿಸುವ (ನಿಯೋ ಬುದ್ಧಿಸ್ಟ್ ಹೊರತುಪಡಿಸಿ) ಸರ್ಕಾರದ ತೀರ್ಮಾನವನ್ನು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಸ್ವಾಗತಿಸುವುದಾಗಿ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಳ ಸಮುದಾಯಗಳ ಅಥವಾ ದಲಿತ ಸಮುದಾಯಗಳ ಬಗೆಗಿನ ಅಸಡ್ಡೆ, ಅಸಹಕಾರ ಮತ್ತು ದೌರ್ಜನ್ಯ ಮನಸ್ಥಿತಿಗಳು ಸಮಾಜದಲ್ಲಿ ಕಡಿಮೆಯಾಗುತ್ತಿಲ್ಲ. ನಮ್ಮವರೇ ಆದ ಮಾನವ ತಳ ಸಮುದಾಯಗಳನ್ನು ಮುಂದುವರಿದ ಬಲಿಷ್ಠ ಸಮುದಾಯಗಳು ಇಂದಿಗೂ ಸಹಿಸಿಕೊಳ್ಳಲಾಗದ ಪರಿಸ್ಥಿತಿ ಸಮಾಜದಲ್ಲಿದೆ. ಆಗಾಗ ಇಂತಹ ಅಮಾನವೀಯ, ಅಸಹಿಷ್ಣುತೆಯ ದೌರ್ಜನ್ಯಗಳು ನಡೆದು ಅನೇಕರ ಸಾವು ನೋವುಗಳಿಗೆ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಇಂತಹ ಸಂದರ್ಭವನ್ನರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೌರ್ಜನ್ಯಕ್ಕೊಳಗಾಗಿ ಸಾವನ್ನಪಿದ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವ ತೀರ್ಮಾನ ಅತ್ಯಂತ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಅದೇ ಸಂದರ್ಭದಲ್ಲಿ ದುರ್ಬಲ ವರ್ಗಗಳಾದ ಪತಿಶಿಷ್ಟ ಜಾತಿ/ವರ್ಗಗಳು ಆಸೆ, ಆಮಿಷಗಳಿಗೆ ಬಲಿಯಾಗಿ ಅನ್ಯ ಧರ್ಮಗಳಿಗೆ ಮತಾಂತರಗೊಂಡರೂ ಅವರ ಬದುಕು ದುಸ್ತರವೇ ಆಗಿದ್ದು ಕೆಲವು ದಲಿತರು ಕ್ರೈಸ್ತ ಧರ್ಮ ಸೇರಿ ಈಗಲೂ ದಲಿತ ಕ್ರೈಸ್ತರಾಗಿಯೂ ಮತ್ತೆ ಕೆಲವರು ಇಸ್ಲಾಂ ಧರ್ಮ ಸೇರಿ ದಲಿತ ಮುಸ್ಲಿಮರಾಗಿಯೂ ಹೀಗೆ ಯಾವುದೇ ಅನ್ಯ ಧರ್ಮ ಸೇರಿದರು. ಇಲ್ಲಿ ದಲಿತರಾದವರು ಅಲ್ಲಿಯೂ ದಲಿತರಾಗಿಯೇ ಇದ್ದಾರೆ. ಇಂತಹವರನ್ನು (ಬೌದ್ದ ಧರ್ಮವನ್ನು ಹೊರತುಪಡಿಸಿ) ಬೇರಾವುದೇ ಧರ್ಮ ಸೇರಿದವರಿಗೆ ಮೀಸಲಾತಿ ಸೌಲಭ್ಯಗಳನ್ನು ರದ್ದು ಪಡಿಸುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

Join Whatsapp