ಬೆಂಗಳೂರು: ಮಠದ ಅನುದಾನದಲ್ಲೂ 30% ಕಮಿಷನ್ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಾವು ಮಠಕ್ಕೆ ಅನುದಾನವನ್ನೇ ಪಡೆಯುವುದಿಲ್ಲ. ಈ ಹಿಂದೆ ಕೊಟ್ಟ ಅನುದಾನ ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ ಎಂದು ಹೇಳಿದ್ದಾರೆ.
30 ಪರ್ಸೆಂಟ್ ಕಮೀಷನ್ ಪಡೆದು ಮಠಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು, ಈ ಕುರಿತು ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, ದಿಂಗಾಲೇಶ್ವರರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬಹುಶಃ ಅವರ ಬಳಿ ಆ ಕಮೀಷನ್ ಆರೋಪದ ಬಗ್ಗೆ ಮಾಹಿತಿ ಇರಬಹುದು. ಆದರೆ ನಮಗೆ ಸರ್ಕಾರದ ಅನುದಾನ ಅಗತ್ಯವಿಲ್ಲ, ಸಮುದಾಯಕ್ಕೆ 2ಎ ಮೀಸಲಾತಿ ಬೇಕಷ್ಟೇ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ 2ಎ ಮೀಸಲಾತಿ ನೀಡಲು ಏ. 21ರ ಅಂತಿಮ ಗಡುವು ನೀಡಲಾಗಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಸ್ಪಂದಿಸದಿದ್ದರೆ, ಸರ್ಕಾರವೇ ಮುಂದಾಗುವ ಅನಾಹುತಗಳಿಗೆ ಹೊಣೆ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.