ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ಕಾಳಜಿಯನ್ನು ಉಲ್ಲೇಖಿಸಿ, ಕೇಂದ್ರ ಸರಕಾರವು 43 ಮೊಬೈಲ್ ಅಪ್ಲಿಕೇಶನ್‌ಗಳನ್ನು ಮಂಗಳವಾರ ನಿಷೇಧಿಸಿದೆ. ಇದರಲ್ಲಿ ಹೆಚ್ಚಿನವು ಚೈನಾ ಕಂಪೆನಿಯ ಆಪ್ ಗಳಾಗಿವೆ. ಇವುಗಳಲ್ಲಿ ಚೀನಾದ ಚಿಲ್ಲರೆ ದೈತ್ಯ ಅಲಿಬಾಬಾ ಗ್ರೂಪ್ ಒಡೆತನದ ನಾಲ್ಕು ಅಪ್ಲಿಕೇಶನ್ ಗಳಾದ ಅಲಿ ಸಪ್ಲೈಯರ್ಸ್ ಮೊಬೈಲ್ ಅಪ್ಲಿಕೇಶನ್, ಅಲಿಬಾಬಾ ವರ್ಕ್‌ಬೆಂಚ್, ಅಲಿ ಎಕ್ಸ್ಪ್ರೆಸ್ ಮತ್ತು ಅಲಿಪೇ ಕ್ಯಾಷಿಯರ್ ಒಳಗೊಂಡಿದೆ.
ಭಾರತದ ಸಾರ್ವಭೌಮತ್ವ , ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಪೂರ್ವಗ್ರಹಪೀಡಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಭಾರತ ಮತ್ತು ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನತೆಯ ಮಧ್ಯೆ ನಿಷೇಧ ವಿಧಿಸಲಾಗಿದೆ. ಜೂನ್ 29ರಂದು 59 ಮೊಬೈಲ್ ಅಪ್ಲಿಕೇಶನ್ ಗಳ ಪ್ರವೇಶವನ್ನು ನಿರ್ಬಂಧಿಸಿದ ಕೇಂದ್ರ ಸರಕಾರವು, ಸೆಪ್ಟೆಂಬರ್ 21ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಇನ್ನೂ 118 ಅಪ್ಲಿಕೇಶನ್ ಗಳನ್ನು ನಿಷೇಧಿಸಿತ್ತು.