ಪಶ್ಚಿಮ ಬಂಗಾಳ: ಕುರ್ ಆನ್, ಹದೀಸ್ ಪ್ರತಿಗಳನ್ನು ‘ಜಿಹಾದಿ ಸಾಹಿತ್ಯ’ವೆಂದ ಎನ್.ಐ.ಎ

Prasthutha: November 24, 2020

►► ಶೌಚಗುಂಡಿಯನ್ನು ಸುರಂಗ ಎಂದು ಕರೆದ ತನಿಖಾ ಏಜೆನ್ಸಿ

►► ಕುರಿ ಮೇಯಿಸುವಾತ ಮಾಸ್ಟರ್ ಮೈಂಡ್ ಭಯೋತ್ಪಾದಕ

ಹೊಸದಿಲ್ಲಿ: ಪವಿತ್ರ ಕುರ್ ಆನ್, ಹದೀಸ್ ((ಪ್ರವಾದಿ ಮುಹಮ್ಮದ್ ರವರ ಹೇಳಿಕೆಗಳು) ಮತ್ತು ಅರೇಬಿಕ್ ಹಾಗೂ ಪರ್ಶಿಯನ್ ಭಾಷೆಯಲ್ಲಿರುವ ಇಸ್ಲಾಮಿಕ್ ಸಾಹಿತ್ಯಗಳು ‘ಜಿಹಾದಿ ಸಾಹಿತ್ಯ’ಗಳೇ? ಭಾರತದಲ್ಲಿ ಮುಸ್ಲಿಮರು ಗಡ್ಡ ಬೆಳೆಯುವುದು ಅಪರಾಧವೇ? ಆದರೆ ಈ ಸಾಹಿತ್ಯಗಳನ್ನು ಮುಟ್ಟುಗೋಲು ಹಾಕಲಾದ ‘ಜಿಹಾದಿ ಸಾಹಿತ್ಯ’ವೆಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಹೇಳಿದೆ. ಅಲ್ ಕಾಯಿದಾ ಸಂಬಂಧ ಹೊಂದಿರುವವರು ಎನ್ನಲಾದವರನ್ನು ಬಂಧಿಸುವುದಕ್ಕಾಗಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ದಾಳಿಗಳನ್ನು ನಡೆಸುವಾಗ ಇವುಗಳನ್ನು ಎನ್.ಐ.ಎ ಮುಟ್ಟುಗೋಲು ಹಾಕಿದೆ.

ಮಲ್ಟಿ ಮೀಡಿಯಾ ಸೆಲ್ ಫೋನ್ ಗಳನ್ನೂ ಹೊಂದಿರದವರು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ತಮ್ಮ ಫೋನ್ ನಲ್ಲಿ ವಾಟ್ಸಪ್ ಗುಂಪುಗಳನ್ನು ರಚಿಸಿದ್ದಾರೆಂದು ನೀವು ನಂಬುತ್ತೀರಾ? ಖಾತೆಯಲ್ಲಿ ಜುಜುಬಿ 250 ರೂಪಾಯಿ ಹೊಂದಿರುವವರು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದರಲ್ಲಿ ಭಾಗಿಯಾಗಬಹುದೆಂದು ನೀವು ಭಾವಿಸುತ್ತೀರಾ?

ಓರ್ವ ಎಲೆಕ್ಟ್ರೀಶಿಯನ್ ಬಳಸುವ ರಂಧ್ರ ಕೊರೆಯುವ ಯಂತ್ರ (ಡ್ರಿಲ್ ಮೆಶಿನ್) ಒಂದು ಅಪಾಯಕಾರಿ ಶಸ್ತ್ರವಾಗಬಹುದೇ? ಆತನ ಟೂಲ್ ಬಾಕ್ಸ್ ಆಯುಧಗಳ ಸಂಗ್ರಹಾಗಾರವಾಗಬಹುದೇ? ಎಲೆಕ್ಟ್ರೀಶಿಯನ್ ಬಳಸುವ ಸುರಕ್ಷಾ ಜಾಕೆಟ್ ಗುಂಡು ನಿರೋಧಕ ಜಾಕೆಟ್ ಆಗಬಹುದೇ? ಮನೆಯಲ್ಲಿ ಶೌಚಾಲಯ ನಿರ್ಮಿಸುವುದಕ್ಕಾಗಿ ರಚಿಸುವ ಶೌಚ ಗುಂಡಿ ಒಂದು ಸುರಂಗವಾಗಬಹುದೇ?

ಅಲ್ಪ ಪ್ರಜ್ನೆಯಿರುವ ಯಾರೇ ವ್ಯಕ್ತಿ ಎನ್.ಐ.ಎಯ ಈ ಆರೋಪಗಳನ್ನು ನಂಬುವುದು ಅಸಾಧ್ಯ. ಆದರೆ ಗಂಭೀರ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನಾ ಪ್ರಕರಣಗಳ ತನಿಖೆ ಮಾಡುವುದಕ್ಕಾಗಿ ನೇಮಿಸಲಾದ ಉನ್ನತ ಅರ್ಹತೆ ಮತ್ತು ತರಬೇತಿಗಳನ್ನು ಪಡೆದ ಎನ್.ಐ.ಎ ಅಧಿಕಾರಿಗಳು ಅಲ್ ಕಾಯಿದ ಸಂಪರ್ಕದ ಆರೋಪದಲ್ಲಿ ಬಂಧಿಸಿದ 11 ಮಂದಿಯ ವಿರುದ್ಧ ಪ್ರಕರಣ ಸಿದ್ಧಪಡಿಸಲು ತಯಾರಿಸಿದ ವರದಿಯಲ್ಲಿ ಈ ವಿಷಯಗಳನ್ನು ಉಲ್ಲೇಖಿಸಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ ಈ ವರ್ಷದ ಸೆ.19ರಂದು ಎನ್.ಐ.ಎ ಅಲ್ ಕಾಯಿದಾ ಸಂಪರ್ಕದ ಆರೋಪದಲ್ಲಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆರು ಮಂದಿಯನ್ನು ಬಂಧಿಸಿತ್ತು. ಪಶ್ಚಿಮ ಬಂಗಾಳದವರೆನ್ನಲಾದ ಇನ್ನೂ ಮೂವರು ವ್ಯಕ್ತಿಗಳನ್ನು ಕೇರಳದ ಎರ್ನಾಕುಲಂನಿಂದ ನಂತರ ಬಂಧಿಸಲಾಯಿತು. ಇನ್ನಿಬ್ಬರನ್ನು ಮತ್ತೆ ಮುರ್ಶಿದಾಬಾದ್ ನಿಂದ ಬಂಧಿಸಲಾಯಿತು. ಅಮಾಯಕರನ್ನು ಕೊಲ್ಲುವ ಮತ್ತು ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಯೋಜನೆಯೊಂದಿಗೆ ರಾಷ್ಟ್ರ ರಾಜಧಾನಿಯೊಳಗೊಂಡಂತೆ ವಿವಿಧ ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಅವರು ಯೋಜನೆ ರೂಪಿಸಿದ್ದರೆಂದು ಎನ್.ಐ.ಎ ಹೇಳಿತ್ತು. ಆದರೆ ಬಂಧಿತರ ಕುಟುಂಬಸ್ಥರು ಕಡಾಖಂಡಿತವಾಗಿ ಎನ್.ಐ.ಎ ಆರೋಪಗಳನ್ನು ಆಧಾರರಹಿತವೆಂದು ನಿರಾಕರಿಸಿದ್ದಾರೆ.

ಎನ್.ಐ.ಎ ಪ್ರಕಾರ ಅವರು ಪಾಕಿಸ್ತಾನ ಮೂಲದ ಅಲ್ ಕಾಯಿದಾ ಭಯೋತ್ಪಾದಕರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಮೂಲಭೂತೀಕರಣಗೊಂಡಿದ್ದರು. ಆದರೆ ಅಚ್ಚರಿಯೆಂದರೆ ಆರೋಪಿಗಳು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸಲು ಅಗತ್ಯವಿರುವ ಮಲ್ಟಿ ಮೀಡಿಯಾ ಮೊಬೈಲ್ ಫೋನ್ ಗಳನ್ನೂ ಹೊಂದಿರಲಿಲ್ಲ. ಅನಾಮಧೇಯ ಪೂರೈಕೆದಾರರಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಪಡೆಯಲು ಅವರು ಹೊಸದಿಲ್ಲಿಗೆ ಪ್ರಯಾಣಿಸಲು ಯೋಜಿಸಿದ್ದರೆಂದು ಎನ್.ಐ.ಎ ಪ್ರತಿಪಾದಿಸಿದೆ. ಆದರೆ ಎನ್.ಐ.ಎ ದಿಲ್ಲಿಯಲ್ಲಿ ಶಸ್ತ್ರಾಸ್ತ್ರ ಪೂರೈಕೆದಾರರು ಯಾರು ಎಂದಲು ಶೋಧಿಸಲು ಮತ್ತು ಅಂತಿಮವಾಗಿ ಈ ದೊಡ್ಡ ಭಯೋತ್ಪಾದನಾ ಸಂಚನ್ನು ಪತ್ತೆಹಚ್ಚಲು ವಿಫಲವಾಗಿದೆ.

ಎನ್.ಐ.ಎಯಿಂದ ಬಂಧಿತರಾದ ವ್ಯಕ್ತಿಗಳನ್ನು ಎರ್ನಾಕುಳಂ ನಲ್ಲಿ (ಕೇರಳ) ಆಡು ಮೇಯಿಸುವ ಕೆಲಸ ಮಾಡುತ್ತಿದ್ದ ಮುರ್ಶಿದ್ ಹಸನ್, ಯಾಕುಬ್ ಬಿಸ್ವಾಸ್, ಮುಶರಫ್ ಹುಸೈನ್, ನಜ್ಮುಸ್ಸಾಕಿಬ್, ಟೇಲರ್ ವೃತ್ತಿ ಮಾಡುತ್ತಿದ್ದ ಅಬೂ ಸುಫಿಯಾನ್, ಮೈನುಲ್ ಮೊಂಡಲ್, ಕಾಲೇಜೊಂದರಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದ ಲಿಯು ಯೀನ್ ಅಹ್ಮದ್,  ಅಲ್ ಮಮುಮ್ ಕಮಾಲ್, ಅತೀಕುರಹ್ಮಾನ್, ಅಬ್ದುಲ್ ಮೂಮಿನ್, ಶಮೀಮ್ ಅನ್ಸಾರಿ ಎಂದು ಗುರುತಿಸಲಾಗಿದೆ.

ಭಯೋತ್ಪಾದನೆಗೆ ಹಣಕಾಸು ಒದಗಿಸಿದ, ಜಿಹಾದಿ ಸಾಹಿತ್ಯ ಹೊಂದಿದ, ಅಪಾಯಕಾರಿ ಆಯುಧಗಳನ್ನು ಹೊಂದಿದ ಆರೋಪವನ್ನು ಎನ್.ಐ.ಎ ಅವರ ಮೇಲೆ ಹೊರೆಸಿದೆ. ಆದರೆ ವಾಸ್ತವ ಸಂಗತಿಯು ಸಂಪೂರ್ಣ ಭಿನ್ನವಾಗಿದೆ.

‘ಇಂಡಿಯಾ ಟುಮಾರೊ’ದೊಂದಿಗೆ ಮಾತನಾಡಿದ ಸಂತ್ರಸ್ತರ ಕುಟುಂಬ ಸದಸ್ಯರು ಹೇಳುವಂತೆ, ಪೊಲೀಸರು ಬಾಗಿಲನ್ನು ಒಡೆದು ಮನೆಗೆ ಪ್ರವೇಶಿಸಿದ್ದರು. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಹಲ್ಲೆ ನಡೆಸಿದ್ದರು. ಬಲವಂತವಾಗಿ ಖಾಲಿ ಕಾಗದದ ಮೇಲೆ ಸಹಿ ಹಾಕಿಸಿದ್ದರು.

ಬಂಧಿತರ ಕುರಿತು ಸುಳ್ಳು ಹೇಳಿಕೆಗಳನ್ನು ಪಡೆಯುವುದಕ್ಕಾಗಿ ಎನ್.ಐ.ಎ ಅಧಿಕಾರಿಗಳು ತಮಗೆ, ತಮ್ಮ ಸಂಬಂಧಿಗಳು ಮತ್ತು ಸ್ನೇಹಿತರಿಗೆ ಕಿರುಕುಳ ನೀಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಎಲ್ಲಾ ಬಂಧಿತ ಆರೋಪಿಗಳನ್ನು ಮೊದಲು ಕೋಲ್ಕತ್ತಾಗೆ ಕೊಂಡೊಯ್ಯಲಾಯಿತು ಮತ್ತು ನಂತರ ದಿಲ್ಲಿಯ ತಿಹಾರ್ ಜೈಲಿಗೆ ವರ್ಗಾಯಿಸಲಾಯಿತು.

ಇಂಡಿಯಾ ಟುಮಾರೊ ದೊಂದಿಗೆ ಮಾತನಾಡಿದ ಆರೋಪಿ ಲಿಯು ಯೀನ್ ಅಹ್ಮದ್ ನ ಕುಟುಂಬ ಸದಸ್ಯ ಅಬ್ದುಲ್ ಕಲಾಮ್, “ಪವಿತ್ರ ಕುರ್ ಆನ್, ಹದೀಸ್ ಪ್ರತಿಗಳು, ನಮಾಝ್ ಪುಸ್ತಕಗಳು ಅಥವಾ ಸಲಾತ್ ಗಳು (ಪ್ರಾರ್ಥನಾ ಪುಸ್ತಕ) ಮತ್ತು ದಾಳಿಯ ವೇಳೆ ಮುಟ್ಟುಗೋಲು ಹಾಕಲಾದ ಇತರ ಧಾರ್ಮಿಕ ಸಹಿತ್ಯಗಳನ್ನು ಎನ್.ಐ.ಎ ಜಿಹಾದಿ ಸಾಹಿತ್ಯ ಎಂದು ಪ್ರತಿಪಾದಿಸಿದೆ” ಎಂದಿದ್ದಾರೆ.

ಆರೋಪಿ ವ್ಯಕ್ತಿಗಳು ಗಡ್ಡ ಬಿಟ್ಟಿರುವುದನ್ನೂ ವಿರೋಧಿಸಿದ ಎನ್.ಐ.ಎ ಅಧಿಕಾರಿಗಳು ಈ ಕುರಿತು ಅವರ ಕುಟುಂಬಸ್ಥರನ್ನು ಪ್ರಶ್ನಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಮಲ್ಟಿ ಮೀಡಿಯಾ ಮೊಬೈಲ್ ಫೋನ್ ಗಳನ್ನು ಹೊಂದಿರಲಿಲ್ಲ. ಆದರೆ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ವಾಟ್ಸಪ್ ಗುಂಪುಗಳನ್ನು ಸ್ಥಾಪಿಸಿದ ಆರೋಪವನ್ನು ಎನ್.ಐ.ಎ ಅವರ ಮೇಲೆ ಹೊರಿಸಿದೆ.

“ಅವರ ಬಂಧನವಾಗಿ ಎರಡು ತಿಂಗಳು ಕಳೆದಿವೆ. ಆದರೆ ನಾವು ಅವರನ್ನು ಭೇಟಿಯಾಗಿಲ್ಲ. ನಾವು ತುಂಬಾ ಬಡವರು ಮತ್ತು ಪಶ್ಚಿಮ ಬಂಗಾಳದಿಂದ ದಿಲ್ಲಿಗೆ ಆಗಾಗ್ಗೆ ಪ್ರಯಾಣಿಸುವುದು ನಮಗೆ ತುಂಬಾ ಕಷ್ಟದ ಕೆಲಸ” ಎಂದು ಕಲಾಮ್ ಹೇಳಿದ್ದಾರೆ

ಲಿಯುಯೀನ್ ಅಹ್ಮದ್ ನ ಕುಟುಂಬಸ್ಥರು ಹೇಳುವಂತೆ ಆತ ಡೊಂಕಾಲ್ ಬನ್ಸಂತ್ಪುರ್ ಕಾಲೇಜಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. “ಕೆಲಸ ಮಾಡುವಾಗ ತೊಟ್ಟುಕೊಳ್ಳಲು ಒಂದು ಟೂಲ್ ಬಾಕ್ಸ್ ಮತ್ತು ಸುರಕ್ಷಾ ಕೋಟನ್ನು ಆತ ಹೊಂದಿದ್ದ. ಆತನ ಡ್ರಿಲ್ ಯಂತ್ರವನ್ನು ಅಪಾಯಕಾರಿ ಶಸ್ತ್ರ,  ಟೂಲ್ ಬಾಕ್ಸನ್ನು ಸ್ಫೋಟಕ ಶೇಖರಿಸಿಡುವ ಸಂಗ್ರಹಗಾರ ಮತ್ತು ಸುರಕ್ಷಾ ಕೋಟನ್ನು ಗುಂಡು ನಿರೋಧಕ ಜಾಕೆಟ್ ಎಂದು ಎನ್.ಐ.ಎ ಬಣ್ಣಿಸಿದೆ” ಎಂದು ಅಹ್ಮದ್ ರ ಸಂಬಂಧಿ ಹೇಳಿದ್ದಾರೆ.

ಎನ್.ಐ.ಎ ಮಾಸ್ಟರ್ ಮೈಂಡ್ ಎಂಬುದಾಗಿ ಕರೆದ ಮುರ್ಶಿದ್ ಹಸನ್,  ಎರ್ನಾಕುಳಂ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಆತ ಕುರಿ ಮತ್ತು ಆಡನ್ನು ಮೇಯಿಸುವ ಕೆಲಸವನ್ನು ಮಾಡುತ್ತಿದ್ದ. ಆತ ಅಶಿಕ್ಷಿತ ಮತ್ತು ಮಾನಸಿಕವಾಗಿ ಅಸ್ಥಿರತೆಯಿರುವ ವ್ಯಕ್ತಿ ಎಂಬುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ.

ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎ.ಪಿ.ಸಿ.ಆರ್), ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ (ಎ.ಡಿ.ಪಿ.ಆರ್) ಮತ್ತು ಬಂಧಿ ಮುಕ್ತಿ ಮೋರ್ಚಾ ಸಂಘಟನೆಗಳ ಸತ್ಯಶೋಧನಾ ತಂಡವು ಸಿದ್ಧಪಡಿಸಿದ ವರದಿಯು “ಬಂಧಿತ ವ್ಯಕ್ತಿಗಳು ಅತ್ಯಂತ ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ. ಅವರ ಕುರಿತು ಅವರ ಗ್ರಾಮದ ಯಾರೂ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿಲ್ಲ. ಯಾವುದೇ ವ್ಯಕ್ತಿ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಯಾವುದೇ ಆರೋಪಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸಿಲ್ಲ” ಎಂದಿದೆ.

  “ಅವರಲ್ಲಿ ಕೆಲವರು ಸರಕಾರಿ ನೀತಿಯ ಅಡಿ ಮನೆಗಳನ್ನು ಕಟ್ಟುವುದಕ್ಕಾಗಿ  50000 ರೂಪಾಯಿಯನ್ನು ಅಕೌಂಟ್ ಮೂಲಕ ಪಡೆದಿದ್ದರು. ಅದನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿರುವುದಕ್ಕೆ ಜೋಡಿಸಲಾಗಿದೆ” ಎಂದು ಜಂಟಿ ಸತ್ಯಶೋಧನಾ ತಂಡ ಹೇಳಿದೆ.

ಸತ್ಯಶೋಧನಾ ತಂಡದ ಪ್ರಕಾರ, ಪೊಲೀಸರು ರಾತ್ರಿ 2.30ರ ವೇಳೆಗೆ ಬಾಗಿಲನ್ನು ಒಡೆದು ಅಬೂ ಸುಫಿಯಾನ್ ಮನೆಯನ್ನು ಪ್ರವೇಶಿಸಿದ್ದರು ಮತ್ತು ಕುಟುಂಬ ಸದಸ್ಯರನ್ನು ಥಳಿಸಿದ್ದರು. ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಅಬೂ ಸುಫಿಯಾನ್ ನ ವೆಲ್ಡಿಂಗ್ ಯಂತ್ರವನ್ನು ಎನ್.ಐ.ಎ ಅಧಿಕಾರಿಗಳು ಮುಟ್ಟುಗೋಲು ಹಾಕಿದರು. ವರದಿಯ ಪ್ರಕಾರ, ಅಬೂ ಸುಫಿಯಾನ್ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತೋಡಲಾಗಿದ್ದ ಗುಂಡಿಯನ್ನು ಎನ್.ಐ.ಎ ಅಧಿಕಾರಿಗಳು ಸುರಂಗವೆಂದು ಅನುಮಾನಿಸಿದ್ದಾರೆ. 6000 ರೂಪಾಯಿಗಿಂತ ಹೆಚ್ಚು ಹಣವನ್ನು ವರ್ಗಾಯಿಸಲಾಗಿಲ್ಲವೆಂದು ಅಬೂ ಸುಫಿಯಾನ್ ಬ್ಯಾಂಕ್ ಖಾತೆಯನ್ನು ಪರಿಶೋಧಿಸುವುದರಿಂದ ತಿಳಿಯುತ್ತದೆ. ಆದರೆ ಎನ್.ಐ.ಎ ಆತನ ವಿರುದ್ಧ ಲಕ್ಷಾಂತರ ರೂಪಾಯಿ ವಹಿವಾಟು ಮಾಡಿದ, ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪವನ್ನು ಎನ್.ಐ.ಎ ಮಾಡಿದೆ.

ಅದೇರೀತಿ, ಡೊಂಕಾಲ್ ಗ್ರಾಮದ ಅಲ್ ಮಾಮುನ್ ವಿರುದ್ಧವು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪಗಳನ್ನು ಎನ್.ಐ.ಎ ಹೇರಿದೆ. ಆದರೆ ಆತನ ಬಂಧನದ ವೇಳೆ ಖಾತೆಯಲ್ಲಿ ಕೇವಲ 250 ರೂಪಾಯಿ ಠೇವಣಿಯಿತ್ತಷ್ಟೆ. ಆತ ಎರ್ನಾಕುಲಂನಲ್ಲಿ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ. ಅದೇ ರೀತಿಯಲ್ಲಿ ಎರ್ನಾಕುಲಂ ನಲ್ಲಿ ಕೆಲಸ ಮಾಡುತ್ತಿದ್ದ 29ರ ಹರೆಯದ ಮೈನುಲ್ ಮೊಂಡಲ್ ಗೆ ತೀವ್ರವಾಗಿ ಥಳಿಸಲಾಗಿದೆ. ಆತನ ಬಂಧನದ ಕುರಿತು ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿಲ್ಲ ಎಂದು ಸತ್ಯಶೋಧನಾ ವರದಿ ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ