November 24, 2020

ದನದ ಮಾಂಸದ ಅಡುಗೆಯನ್ನು ‘ಗೋಮಾತೆ’ ಎಂದು ಕರೆದ ಹೋರಾಟಗಾರ್ತಿ: ಮಾಧ್ಯಮ ಬಳಕೆಯನ್ನು ನಿರ್ಬಂಧಿಸಿದ ಹೈಕೋರ್ಟ್

ಹೊಸದಿಲ್ಲಿ:ದೃಶ್ಯ ಅಥವಾ ಎಲೆಕ್ಟ್ರಾನಿಕ್ ಒಳಗೊಂಡಂತೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ತನ್ನ ಅಭಿಪ್ರಾಯಗಳನ್ನು ಪ್ರಕಟಿಸುವುದರ ವಿರುದ್ಧ ಹೋರಾಟಗಾರ್ತಿ ರೆಹನಾ ಫಾತಿಮಾರ ಮೇಲೆ ಕೇರಳ ಹೈಕೋರ್ಟ್ ಸೋಮವಾರ ನಿರ್ಬಂಧ ಹೇರಿದೆ

ಅಡುಗೆ ವೀಡಿಯೊವೊಂದನ್ನು ಪೋಸ್ಟ್ ಮಾಡಿ ‘ಗೋಮಾತೆ’ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಹಿಂದಿನ ಪ್ರಕರಣದಲ್ಲಿ ಫಾತಿಮಾರಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಬೇಕೆಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ  ಸುನಿಲ್ ಥಾಮಸ್ ರನ್ನೊಳಗೊಂಡ ಏಕ ಸದಸ್ಯ ಪೀಠವು ಈ ಆದೇಶವನ್ನು ನೀಡಿದೆ.

ಮಾಂಸವನ್ನು ‘ಗೋಮಾತೆ’ ಎಂದು ಕರೆಯುವುದರಿಂದ ದನವನ್ನು ದೇವತೆಯಾಗಿ ಪೂಜಿಸುವ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಲಿರುವುದರಿಂದ ‘ನ್ಯಾಯದ ಹಿತಾಸಕ್ತಿ’ಯಿಂದ ಈ ನಿರ್ಬಂಧವನ್ನು ಹಾಕಲಾಗಿದೆ ಎಂದು ಥಾಮಸ್ ಹೇಳಿದ್ದಾರೆ.

ಲೈಂಗಿಕ ಭಂಗಿಯಲ್ಲಿತನ್ನನ್ನು ಪ್ರದರ್ಶಿಸಿಕೊಂಡ ಮತ್ತು ಹಿಂದೂ ದೇವತೆ ಅಯ್ಯಪ್ಪರ ಕುರಿತು ‘ಅವಮಾನಕಾರಿ ವಿಷಯ’ವನ್ನು ಪೋಸ್ಟ್ ಮಾಡಿದ  2018ರ ಪ್ರಕರಣದಲ್ಲಿ ಫಾತಿಮಾರಿಗೆ ಜಾಮೀನು ನೀಡಲಾಗಿತ್ತು.

ಮೇ ತಿಂಗಳಲ್ಲಿ ರೆಹನಾ ‘ಗೋಮಾತಾ ಉಳರ್ತು’ ಎಂಬ ಶೀರ್ಷಿಕೆ ಕೊಟ್ಟು  ದನದ ಮಾಂಸದ ಅಡುಗೆಯನ್ನು ಪೋಸ್ಟ್ ಮಾಡಿದ್ದರು. 2018ರ ಪ್ರಕರಣ ಮುಗಿಯುವ ತನಕ ರೆಹಾನಾರಿಗೆ ಮಾಧ್ಯಮ ಬಳಕೆಯನ್ನು ಹೈಕೋರ್ಟ್ ನಿರ್ಬಂಧಿಸಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ