ಮಂಗಳೂರು: ಹಿಜಾಬ್ ತೀರ್ಪಿನ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಧಿಸಲಾದ ನಿಷೇಧಾಜ್ಞೆಯನ್ನು ಮಾರ್ಚ್ ತಿಂಗಳಾಂತ್ಯದವರೆಗೂ ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಆದೇಶಿಸಿದ್ದಾರೆ.
ಮಾರ್ಚ್ 19ರ ಸಾಯಂಕಾಲ 6 ಗಂಟೆಯಿಂದ ಮಾರ್ಚ್ 31ರ ಸಾಯಂಕಾಲ 6 ಗಂಟೆವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ನಿಷೇಧಾಜ್ಞೆ ಸಮಯ ಐದು ಹಾಗೂ ಅದಕ್ಕಿಂತ ಹೆಚ್ಚಿನ ಮಂದಿ ಗುಂಪುಗೂಡುವುದು, ವಿಜಯೋತ್ಸವ ಅಥವಾ ಸಂಭ್ರಮಾಚರಣೆ, ಮಾರಕಾಸ್ತ್ರ ಕೊಂಡೊಯ್ಯುವುದು, ಪ್ರಚೋದನಕಾರಿ ಭಾಷಣ, ಭಿತ್ತಿ ಪತ್ರ ಪ್ರದರ್ಶನ, ಸಂಗೀತ ನುಡಿಸುವಿಕೆ ಹಾಗೂ ಶಾಂತಿಗೆ ಭಂಗ ತರುವ ಎಲ್ಲಾ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಲಾಗಿದೆ.