ಉಳ್ಳಾಲ: ಇತ್ತೀಚೆಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಶಾಸಕ ಯು.ಟಿ.ಖಾದರ್ ವಿರುದ್ಧ ಸುಳ್ಳಾರೋಪ ಅಡಿಯಲ್ಲಿ ಟೀಕಿಸಿದ್ದು ಸರಿಯಲ್ಲ. ಇದು ಅವರ ವ್ಯಕ್ತಿಗೆ ಶೋಭೆ ತರುವುದಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಭಾನುವಾರ ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಏನು ಮಾಡಿಲ್ಲ. ಖಾದರ್ ಅವರು ಸಂತೋಷ್ ಶೆಟ್ಟಿಯನ್ನು ಗಣನೆಗೆ ತೆಗೆದಿಲ್ಲ. ಈ ಕಾರಣದಿಂದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಪ್ರೇರಿತರಾಗಿ ಬಿಜೆಪಿ ಸೇರುತ್ತಿದ್ದೇನೆ ಎಂಬ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಸಂತೋಷ್ ರವರು ಶಾಸಕ ಯು.ಟಿ. ಖಾದರ್ ವಿರುದ್ಧದ ಆರೋಪದ ಮೊದಲು ಅವರ ಸಾಧನೆಯನ್ನು ಗುರುತಿಸಬೇಕಾಗಿತ್ತು. ಇದ್ಯಾವುದನ್ನು ನಿರ್ವಹಿಸದ ಸಂತೋಷ್ ಕುಮಾರ್ ಶೆಟ್ಟಿ ಶಾಸಕ ಯು.ಟಿ. ಖಾದರ್ ಕೋಮುವಾದದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ, ಎಪಿಎಂಸಿ ಸದಸ್ಯ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಸೇರಿದಂತೆ ಹೆಚ್ಚಿನ ಅಧಿಕಾರವನ್ನು ಅನುಭವಿಸಿದ ಸಂತೋಷ್ ಕುಮಾರ್ ಶೆಟ್ಟಿ ಏಕಾಏಕಿ ಪಕ್ಷ ಮತ್ತು ಶಾಸಕ ಖಾದರ್ ವಿರುದ್ಧ ಈ ರೀತಿಯ ಆರೋಪ ಸರಿಯಲ್ಲ. ಈ ಹಿಂದೆ ಬ್ಲಾಕ್ ಅಧ್ಯಕ್ಷರಾಗಿದ್ದ ಈಶ್ವರ್ ಉಳ್ಳಾಲ ಅವರ ಸ್ಥಾನವನ್ನು ತೆರವುಗೊಳಿಸಿ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ನೇಮಿಸಿದ್ದರು. ಈ ಸಂದರ್ಭದಲ್ಲಿ ಈಶ್ವರ್ ಉಳ್ಳಾಲ್ ಅವರು ಬೇಸರ ವ್ಯಕ್ತಪಡಿಸದೆ ಪಕ್ಷದಲ್ಲೇ ಉಳಿದಿದ್ದಾರೆ. ಇದೆಲ್ಲವನ್ನೂ ಸಂತೋಷ್ ಕುಮಾರ್ ಶೆಟ್ಟಿ ಮರೆತು ಬಿಟ್ಟಿದ್ದಾರೆಂದು ಆರೋಪಿಸಿದ್ದಾರೆ.
ನಾನು 40 ವರ್ಷ ಕಾಂಗ್ರೆಸ್ ನಲ್ಲಿ ದುಡಿದಿದ್ದೇನೆ. ಈ ನಡುವೆ ಒಬ್ಬನನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಖೋಟಾ ದಲ್ಲಿ ಉಳ್ಳಾಲ ವಲಯ ಕಾಂಗ್ರೆಸ್ ಸದಸ್ಯರು ಬರಲು ಶಾಸಕ ಖಾದರ್ ಕಾರಣ ಎಂದು ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.
ಆಸ್ಪತ್ರೆ, ಕುಡಿಯುವ ನೀರು ಇನ್ನಿತರ ಕಾರ್ಯಕ್ರಮಗಳನ್ನು ಯುಟಿ ಖಾದರ್ ರವರ ಮುತುವರ್ಜಿ ಯಿಂದ ಆಗಿದೆ. ಅಲ್ಲದೇ ವಿಶೇಷ ಅನುದಾನ ತರಿಸಿ ಕಾಮಗಾರಿ ಮಾಡಿದ್ದಾರೆ. ಉಳ್ಳಾಲ ತಾಲೂಕು ರಚನೆಯಾಗಲು ವಿವಿಧ ಇಲಾಖೆಗಳು ಬರಲು ಕಾರಣ ಶಾಸಕ ಯುಟಿ ಖಾದರ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಕುಟುಂಬ ರಾಜಕಾರಣ ಮಾಡಿಲ್ಲ. ಸಂತೋಷ್ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂದರ್ಭದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ. ಪಕ್ಷಕ್ಕಾಗಿ ನೀಡಿದ ಕೊಡುಗೆ ಏನು ಎಂಬುವುದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಈ ವೇಳೆ ಮಾತನಾಡಿದ ಸುರೇಶ್ ಭಟ್ನಗರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಖಾದರ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ಅವರ ಅವಧಿಯಲ್ಲಿ ಪಕ್ಷ ಸಂಘಟನೆ ನಡೆದಿರಲಿಲ್ಲ. ಈ ವೇಳೆ ನಾನು ಬ್ಲಾಕ್ ಉಪಾಧ್ಯಕ್ಷನಾಗಿದ್ದೆ. ಸಂತೋಷ್ ಅವರಿಂದ ಉಳ್ಳಾಲದಲ್ಲಿ ಕಾಂಗ್ರೆಸ್ ಏನು ಲಾಭವಾಗಿಲ್ಲ ಎಂದು ಆರೋಪಿಸಿದ್ದಾರೆ.
ಶಾಸಕ ಯು.ಟಿ. ಖಾದರ್ ಅವರನ್ನು ಟೀಕೆ ಮಾಡುವ ನೈತಿಕತೆ ಸಂತೋಷ್ ಕುಮಾರ್ ಶೆಟ್ಟಿಗೆ ಇಲ್ಲ. ಖಾದರ್ ಅವರು ಸ್ವಾರ್ಥಿ, ಭ್ರಷ್ಟಾಚಾರಿ ಎಂದು ಸಂತೋಷ್ ಶೆಟ್ಟಿಗೆ ಗೊತ್ತಿದ್ದರೆ ಅವರಿಗೆ ಮೊದಲೇ ಪಕ್ಷ ಬಿಟ್ಟು ಹೋಗಬಹುದಿತ್ತು. ಇದೀಗ ಕಾಂಗ್ರೆಸ್ ನ ಎಲ್ಲಾ ಸ್ಥಾನಗಳನ್ನು ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವುದು ಸರಿಯಲ್ಲ. ಈ ಹಿಂದೆ ಸಂತೋಷ್ ಅವರು ಪುತ್ತೂರಿನಲ್ಲಿ ಬಿಜೆಪಿ ಸೇರಲು ಮುಂದಾಗಿದ್ದರು. ಆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಡೆದಿದ್ದರು. ಇದೀಗ ಮತ್ತೆ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಬಿಜೆಪಿ ಸೇರ್ಪಡೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ವಿನಾಕಾರಣ ಶಾಸಕರ ವಿರುದ್ಧ ಸುಳ್ಳಾರೋಪ ಸಮಂಜಸವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಹಿಂದುಳಿಗ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್ ಮಾತನಾಡಿದರು.