ನವದೆಹಲಿ: ಸೋಮವಾರ ಭಾರತದ ರೂಪಾಯಿ ಪಾತಾಳಕ್ಕೆ ಕುಸಿದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನೆಗೆತ ಕಂಡಿದ್ದು, ಹಣದುಬ್ಬರಕ್ಕೆ ಕಾರಣವಾಗಿದ್ದು ಸ್ಥಳೀಯ ವ್ಯಾಪಾರ ವಹಿವಾಟಿನಲ್ಲಿ ಭಾರೀ ಕುಸಿತ ಉಂಟಾಗಿದೆ.
ಮಾರ್ಚ್ 7ರ ಸೋಮವಾರ ಬೆಳಿಗ್ಗೆ ಷೇರು ಮಾರುಕಟ್ಟೆಯು 3.25% ಕುಸಿತ ಕಂಡಿತು. ಅಮೆರಿಕದ ಒಂದು ಡಾಲರ್ ಎದುರು ಭಾರತೀಯ ರೂಪಾಯಿ 76.96 ರೂಪಾಯಿಗೆ ಕುಸಿದಿದೆ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಬ್ಯಾರೆಲ್ ಬೆಲೆಯು 14 ವರ್ಷಗಳಲ್ಲೇ ಹೆಚ್ಚಿನದಾಗಿ 138 ಡಾಲರ್ ಗೆ ನೆಗೆದಿದೆ.
ಬಿಎಸ್ ಇ ಸೆನ್ಸೆಕ್ಸ್ 1,791 ಅಂಶ ಕುಸಿಯಿತು, ನಿಫ್ಟಿ ಸೂಚ್ಯಂಕವು 416 ಅಂಕ ಕುಗ್ಗಿತು. ತತ್ಪರಿಣಾಮವಾಗಿ ಷೇರುದಾರರು ಕೋಟಿಗಟ್ಟಲೆ ಲಾಭ ಕಳೆದುಕೊಂಡರು. ಒಟ್ಟಾರೆ ರಿಯಲ್ ಎಸ್ಟೇಟ್, ಬ್ಯಾಂಕು, ಫೈನಾನ್ಸ್, ಆಟೋ ಮತ್ತು ಬಂಡವಾಳ ಸರಕುಗಳು, ಷೇರುಗಳು ಸರಾಸರಿ 4.7% ಕುಸಿದವು.
ಪೆಟ್ರೋಲಿಯಂ ಕಚ್ಚಾ ತೈಲ ಬೆಲೆಯು ಸೋಮವಾರ ಬೆಳಿಗ್ಗೆ 8.50% ಏರಿಕೆ ಕಂಡು ಆಮದು ಮಾಡಿಕೊಳ್ಳುವ ದೇಶಗಳು ಆತಂಕಗೊಂಡಿವೆ.