ಉದ್ಯೋಗ ಬದಲಾವಣೆಗೆ ಅರ್ಹರಾಗಬೇಕಾದರೆ ಅನಿವಾಸಿ ಕಾರ್ಮಿಕರಿಗಿರುವ ನಿಬಂಧನೆಗಳೇನು?

Prasthutha|

►► ನಿಬಂಧನೆ ಬಿಡುಗಡೆಗೊಳಿಸಿದ ಸೌದಿ ಮಾನವ ಸಂಪನ್ಮೂಲ ಸಚಿವಾಲಯ

- Advertisement -

ರಿಯಾದ್: ಈ ತಿಂಗಳ ಆರಂಭದಲ್ಲಿ ಘೋಷಿಸಲಾದ ಕಾರ್ಮಿಕ ಸುಧಾರಣಾ ಕ್ರಮಗಳ ಭಾಗವಾಗಿ ಉದ್ಯೋಗದಾತನ ಒಪ್ಪಿಗೆಯಿಲ್ಲದೆ ಉದ್ಯೋಗ ಬದಲಾವಣೆಯ ಸೇವೆಯನ್ನು ಪಡೆಯಲು ಅನಿವಾಸಿ ಕಾರ್ಮಿಕರನ್ನು ಅರ್ಹಗೊಳಿಸುವ 8 ನಿಬಂಧನೆಗಳನ್ನು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಬಿಡುಗಡೆಗೊಳಿಸಿದೆ.

ವಿದೇಶಿ ಕಾರ್ಮಿಕರಿಗೆ ಉದ್ಯೋಗ ಬದಲಾವಣೆ ಸೇವೆಯು ಲಭ್ಯವಾಗಬೇಕಾದರೆ 5 ನಿಬಂಧನೆಗಳಿವೆ. ಒಬ್ಬ ಉದ್ಯೋಗದಾತನು ಹೊಸ ಸಿಬ್ಬಂದಿಯ ಸೇವೆಯನ್ನು ಪಡೆಯಬೇಕಾದರೂ ಆತ ನಾಲ್ಕು ನಿಬಂಧನೆಗಳನ್ನು ಪೂರೈಸಿರಬೇಕು. ವರ್ಗಾವಣೆ ಪ್ರಕ್ರಿಯೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ವಿಧಿಸಲಾಗುವುದಿಲ್ಲ.

- Advertisement -

ಉದ್ಯೋಗ ಬದಲಾವಣೆಯ ಸೇವೆ ಪಡೆಯುವುದಕ್ಕೆ ಅರ್ಹರಾಗಲು ಐದು ನಿಬಂಧನೆಗಳು:

  • ಸೌದಿ ಅರೇಬಿಯಾದ ಕಾರ್ಮಿಕ ಕಾನೂನಿಗೆ ಅಧೀನವಾಗಿರುವ ಅನಿವಾಸಿ ವೃತ್ತಿಪರನಾಗಿರಬೇಕು.
  • ಸೌದಿ ಅರೇಬಿಯಾವನ್ನು ಪ್ರವೇಶಿಸಿದ ಬಳಿಕ ಪ್ರಸ್ತುತ ಉದ್ಯೋಗದಾತನೊಂದಿಗೆ 1 ವರ್ಷವನ್ನು ಪೂರೈಸಿರಬೇಕು.
  • ಉದ್ಯೋಗಿಯು ದಾಖಲಿತ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು.
  • ಸಚಿವಾಲಯದ ಕ್ವಿವ (Qiva) ಪೋರ್ಟಲ್ ಮುಖಾಂತರ ಹೊಸ ಉದ್ಯೋಗದಾತನಿಂದ ಉದ್ಯೋಗ ಪ್ರಸ್ತಾಪ (Job Offer) ಪಡೆದಿರಬೇಕು.
  • ನೊಟೀಸು ಅವಧಿಯನ್ನು ಉಲ್ಲೇಖಿಸಿ ಸೇವಾ ಕೋರಿಕೆಯ ವರ್ಗಾವಣೆಗಾಗಿ ಉದ್ಯೋಗದಾತನಿಗೆ ಸೂಚನೆ  ನೀಡಿರಬೇಕು

ಅನಿವಾಸಿ ಕಾರ್ಮಿಕರ ಸೇವಾ ವರ್ಗಾವಣೆಯನ್ನು ಕೋರಲು ಹೊಸ ಉದ್ಯೋಗದಾತನಿಗೆ ಇರುವ ನಾಲ್ಕು ನಿಬಂಧನೆಗಳು

  • ಉದ್ಯೋಗದಾತನ ಕಂಪೆನಿಯು ನಿಯಮ ಮತ್ತು ಕಟ್ಟಳೆಗಳ ಪ್ರಕಾರ ವಿಸಾವನ್ನು ಪಡೆಯಲು ಅರ್ಹವಾಗಿರಬೇಕು.
  • ವೇತನ ರಕ್ಷಣಾ ಕಾರ್ಯಕ್ರಮಗಳ ನಿಯಮಗಳಿಗೆ ಬದ್ಧನಾಗಿರಬೇಕು
  • ಕಾರ್ಮಿಕ ಗುತ್ತಿಗೆ ದಸ್ತವೇಜು ಮತ್ತು ಡಿಜಿಟಲೀಕರಣ ಪ್ರೋಗ್ರಾಮ್ ಗಳನ್ನು ಅನುಸರಣೆ ಮಾಡಿರಬೇಕು
  • ಸ್ವಯಂ ಮೌಲ್ಯ ಮಾಪನ ಕಾರ್ಯಕ್ರಮವನ್ನು ಅನುಸರಣೆ ಮಾಡಿರಬೇಕು

ಉದ್ಯೋಗದಾತನ ಒಪ್ಪಿಗೆಯಿಲ್ಲದೆ ಉದ್ಯೋಗ ಬದಲಾವಣೆ ಸೇವೆಯ ಪ್ರಯೋಜನಪಡೆಯಲು ಅನಿವಾಸಿ ಕಾರ್ಮಿಕನನ್ನು ಅರ್ಹಗೊಳಿಸುವ 8 ನಿಬಂಧನೆಗಳು

  • ಸೌದಿ ಅರೇಬಿಯಾಕ್ಕೆ ಕಾರ್ಮಿಕನು ಪ್ರವೇಶಿಸಿದ ಮೂರು ತಿಂಗಳೊಳಗಾಗಿ ಪ್ರಸ್ತುತ ಉದ್ಯೋಗದಾತನೊಂದಿಗೆ ದಾಖಲಿತ ಉದ್ಯೋಗ ಗುತ್ತಿಗೆಯ ಅನುಪಸ್ಥಿಯಲ್ಲಿ
  • ಸತತ ಮೂರು ತಿಂಗಳ ಕಾಲ ಕಾರ್ಮಿಕನ ವೇತನವನ್ನು ಪಾವತಿಸಲು ಉದ್ಯೋಗದಾತನು ವಿಫಲವಾಗಿದ್ದಲ್ಲಿ
  • ಪ್ರಯಾಣ, ಬಂಧನ, ಸಾವು ಅಥವಾ ಇನ್ನಿತರ ಕಾರಣಗಳಿಗಾಗಿ ಉದ್ಯೋಗದಾತನ ಅನುಪಸ್ಥಿಯಿದ್ದಲ್ಲಿ
  • ಕಾರ್ಮಿಕನ ಕೆಲಸದ ಪರವಾನಿಗೆ ಅಥವಾ ರೆಸಿಡೆನ್ಸಿ ಪರವಾನಿಗೆ (ಇಕಾಮ) ಯ ಅವಧಿ ಮುಗಿದಿದ್ದಲ್ಲಿ
  • ವಾಣಿಜ್ಯ ಮುಚ್ಚುಮರೆ ವ್ಯವಾರದಲ್ಲಿ (ತಸತ್ತುರ್) ಉದ್ಯೋಗದಾತನ ತೊಡಗಿರುವುದಾಗಿ ಕಾರ್ಮಿಕನು ದೂರು ನೀಡಿದ್ದಲ್ಲಿ ಮತ್ತು ಕಾರ್ಮಿಕನು ಅದರಲ್ಲಿ ಪಾಲ್ಗೊಂಡಿಲ್ಲದ ಪಕ್ಷದಲ್ಲಿ.
  • ವ್ಯಕ್ತಿಗಳ ಕಳ್ಳಸಾಗಾಟದಲ್ಲಿ ಉದ್ಯೋಗದಾತನು ತೊಡಗಿರುವ ಕುರಿತು ಕಾರ್ಮಿಕನೊಂದಿಗೆ ಸಾಕ್ಷ್ಯವಿದ್ದಲ್ಲಿ
  • ಕಾರ್ಮಿಕ ಮತ್ತು ಪ್ರಸ್ತುತ ಉದ್ಯೋಗದಾತನ ಮಧ್ಯೆ ಕಾರ್ಮಿಕ ವಿವಾದವಿದ್ದು, ವ್ಯಾಜ್ಯದ ವಿಚಾರಣೆಯ ಕುರಿತು ದಿನಾಂಕವನ್ನು ನೀಡಿರುವ ಹೊರತಾಗಿಯೂ ಉದ್ಯೋಗದಾತ ಅಥವಾ ಆತನ ಪ್ರತಿನಿಧಿ ಎರಡು ವಿಚಾರಣೆಗಳಲ್ಲಿ ಪಾಲ್ಗೊಳ್ಳದೆ ಇದ್ದರೆ. ಅಥವಾ ವಿವಾದಗಳ ಸೌಹಾರ್ದಯುತ ಇತ್ಯರ್ಥದ ಎರಡು ಸೆಶನ್ ಗಳಿಗೆ ಹಾಜರಾಗದೆ ಇದ್ದಲ್ಲಿ.
  • ಕಾರ್ಮಿಕನ ವರ್ಗಾವಣೆಗೆ ಪ್ರಸ್ತುತ ಉದ್ಯೋಗದಾತನ ಅನುಮತಿಯಿದ್ದಲ್ಲಿ


Join Whatsapp