ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್‌ ಮೊತ್ತ ಕಡಿತ: ರಾಜ್ಯ ಸರಕಾರದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಕ್ಷೇಪ

Prasthutha|

ಪಿಎಚ್‌ಡಿ ಮತ್ತು ಎಂ.ಫಿಲ್‌ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್‌ ಮೊತ್ತವನ್ನು ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಕೆ. ಅಗ್ನಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

ಪಿಎಚ್‌ಡಿ ಮತ್ತು ಎಂ.ಫಿಲ್‌ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವರ್ಷಕ್ಕೆ ರೂ.3 ಲಕ್ಷ ಫೆಲೋಶಿಪ್‌ ನೀಡುತ್ತಿದ್ದು, ಇದೀಗ ಕೋವಿಡ್‌ ನೆಪವೊಡ್ಡಿ ಈ ಮೊತ್ತವನ್ನು ರೂ.1 ಲಕ್ಷಕ್ಕೆ ಇಳಿಸಿದೆ ಎಂದು ವರದಿಯಾಗಿದೆ. ಅದೇ ರೀತಿ ತಿಂಗಳಿಗೆ ರೂ.25 ಸಾವಿರದಂತೆ ನೀಡಲಾಗುತ್ತಿದ್ದ ಮೊತ್ತವನ್ನು ಕಳೆದ ಹತ್ತು ತಿಂಗಳಿನಿಂದ ಪಾವತಿಸಲಾಗಿಲ್ಲ ಎಂಬ ಆರೋಪವೂ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ. ಮುಸ್ಲಿಮರಲ್ಲಿ ಪಿಎಚ್‌ಡಿ, ಎಂ.ಫಿಲ್‌ನಂತಹ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರ ಪ್ರಮಾಣ ಶೇ.1ರಷ್ಟು ಮಾತ್ರವಿದೆ. ವಸ್ತುಸ್ಥಿತಿ ಹೀಗಿದ್ದರೂ, ರಾಜ್ಯ ಸರಕಾರವು ಫೆಲೋಶಿಪ್‌ ಮೊತ್ತವನ್ನು ಕಡಿತಗೊಳಿಸಿರುವುದು ಖಂಡನೀಯವಾಗಿದೆ.

ರಾಜ್ಯದ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬರುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಅನುದಾನದ ಪೈಕಿ 2020-21ನೆ ಆರ್ಥಿಕ ವರ್ಷದಲ್ಲಿ ಸುಮಾರು 468 ಕೋಟಿ ರೂಪಾಯಿ ಮೊತ್ತವನ್ನು ಕಡಿತಗೊಳಿಸಲು ಈಗಾಗಲೇ ತೀರ್ಮಾನಿಸಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್ ಶಿಪ್ ಮೊತ್ತವೂ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದೀಗ ಕೊರೋನದ ನೆಪವೊಡ್ಡಿ ಫೆಲೋಶಿಪ್‌ ಮೊತ್ತವನ್ನು ಕಡಿತಗೊಳಿಸಿರುವುದು ರಾಜ್ಯ ಸರಕಾರದ ತಾರತಮ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

- Advertisement -

ಮುಸ್ಲಿಮರ ಹಿಂದುಳಿಯುವಿಕೆಯ ಬಗ್ಗೆ ವಿಸ್ತೃತ ವರದಿ ನೀಡಿರುವ ಜಸ್ಟಿಸ್ ರಾಜೀಂದರ್ ಸಾಚಾರ್ ನೇತೃತ್ವದ ಆಯೋಗವು ಅವರನ್ನು ಶೈಕ್ಷಣಿಕವಾಗಿ ಮೇಲೆತ್ತಬೇಕೆನ್ನುವ ಬಗ್ಗೆ ಸಲಹೆಗಳನ್ನು ನೀಡಿತ್ತು. ಎಲ್ಲಾ ವರ್ಗಗಳಿಗೆ ಸಮಾನ ನ್ಯಾಯ ಕಲ್ಪಿಸಬೇಕೆಂಬುದು ಸಂವಿಧಾನದ ಆಶಯವಾಗಿದೆ ಮತ್ತು ಮುಸ್ಲಿಮರ ಹಿಂದುಳಿಯುವಿಕೆಯನ್ನು ನಿರ್ಮೂಲನೆಗೊಳಿಸಲು ಕ್ರಮ ಕೈಗೊಳ್ಳಬೇಕಾಗಿರುವುದು ಆಯಾ ಸರಕಾರಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತನ್ನ ಪಕ್ಷಪಾತಿ ಧೋರಣೆಯಿಂದ ಹಿಂದೆ ಸರಿದು ಅಲ್ಪಸಂಖ್ಯಾತರ ಶೈಕ್ಷಣಿಕ ಸಬಲೀಕರಣವನ್ನು ಖಾತರಿಪಡಿಸಬೇಕು. ಅದೇ ರೀತಿ ಅಲ್ಪಸಂಖ್ಯಾತ ಸಮುದಾಯವೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಮುಂದೆ ಬರಬೇಕಾಗಿದೆ ಎಂದು ಅಯ್ಯೂಬ್ ಅಗ್ನಾಡಿ ತಿಳಿಸಿದ್ದಾರೆ.

Join Whatsapp