ನವದೆಹಲಿ: ಇತ್ತೀಚೆಗೆ ಉಡುಪಿ ಮತ್ತು ಕುಂದಾಪುರದ ಸರ್ಕಾರಿ ಕಾಲೇಜುಗಳಲ್ಲಿ ನಡೆಯುತ್ತಿರುವ ಸ್ಕ್ರಾಫ್, ಕೇಸರಿ ಶಾಲು ಸಂಘರ್ಷ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಮುಸ್ಲಿಮ್ ವಿದ್ಯಾರ್ಥಿನಿಯರ ಸ್ಕ್ರಾಫ್ ಕುರಿತ ಮೋಹನ್ ದಾಸ್ ಪೈ ಹೇಳಿಕೆಗೆ ಕಾಂಗ್ರೆಸ್ ಮುಖಂಡ, ಸಂಸದ ಟ್ವೀಟ್ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಎಲ್ಲಾ ಶಾಲೆಗಳು ಏಕತೆಯನ್ನು ಪ್ರತಿಪಾದಿಸುವಂತಾಗಲು ಏಕರೂಪದ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ. ಇದನ್ನು ಉಲ್ಲಂಘಿಸಿ ಧಾರ್ಮಿಕ ಆಚರಣೆಯನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಇದರ ಹೊರತಾಗಿ ಬೇರೆ ಯಾರನ್ನಾದರೂ ಧರಿಸಲು ಇಚ್ಛಿಸಿದರೆ ವಸ್ತ್ರಸಂಹಿತೆಯಾಗಿ ಬದಲಾಯಿಸಲು ಸರ್ಕಾರಕ್ಕೆ ಮನವಿ ಮಾಡಬೇಕು. ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯಗೊಳಿಸಬೇಡಿ ಎಂದು ಮೋಹನ್ ದಾಸ್ ಪೈ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದ ಶಶಿ ತರೂರ್, ಇದು ಶಾಲೆಯಲ್ಲ ಬದಲಾಗಿ ಕಾಲೇಜು. ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ಯಾವುದೇ ಸಂದರ್ಭದಲ್ಲಿ ಸಿಖ್ಖರು ಪೇಟ, ಕ್ರೈಸ್ತರು ಶಿಲುಬೆ ಮತ್ತು ಹಣೆಯ ಮೇಲೆ ತಿಲಕದಂತಹ ಧಾರ್ಮಿಕ ಆಚರಣೆ ನಿಷೇಧಿಸಲು ಯಾವುದೇ ಕಾನೂನು ಜಾರಿಯಲ್ಲಿಲ್ಲ. ಇವೆಲ್ಲವನ್ನೂ ನಿಷೇಧಿಸಲು ಇದು ಫ್ರಾನ್ಸ್ ಅಲ್ಲ, ಭಾರತ. ಇಲ್ಲಿ ಈ ಎಲ್ಲಾ ಆಚರಣೆಗೆ ಅನುಮತಿಸಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.