ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು, ಮತ್ತಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ಜಿಲ್ಲಾಡಳಿತ ಕೂಡ ಕೋವಿಡ್ ಆರೈಕೆ ಕೇಂದ್ರ ತೆರೆಯಲು ನವೋದಯ ವಿದ್ಯಾಲಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಗುರುತಿಸಿದೆ. ಆದರೆ ನವೋದಯ ವಿದ್ಯಾಲಯದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅಲ್ಲಿನ ವಿದ್ಯಾರ್ಥಿಗಳ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ಆರೈಕೆ ಕೇಂದ್ರ ತೆರೆಯುವ ವಿಷಯ ತಿಳಿದು ಜಿಲ್ಲೆಯ ವಿವಿಧೆಡೆಯಿಂದ ಮಡಿಕೇರಿಗೆ ಆಗಮಿಸಿದ್ದ ಪೋಷಕರು ನಗರದ ಗಾಂಧಿ ಮೈದಾನದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪೋಷಕರು ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯದಂತೆ ಮನವಿ ಮಾಡಿದರು. ಕಳೆದ ಎರಡು ವರ್ಷಗಳಿಂದ ಈ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಬಳಸಿಕೊಂಡಿದ್ದರಿಂದ ನಮ್ಮ ಮಕ್ಕಳಿಗೆ ತರಗತಿಗಳೇ ನಡೆಯಲಿಲ್ಲ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಶಾಲೆಗಳು ಆರಂಭವಾಗಿವೆ. ಇಂತಹ ಸ್ಥಿತಿಯಲ್ಲಿ ಈಗ ಮತ್ತೆ ಕೋವಿಡ್ ಆರೈಕೆ ಕೇಂದ್ರ ತೆರೆದರೆ ನಮ್ಮ ಮಕ್ಕಳ ಶಿಕ್ಷಣ ಸಂಪೂರ್ಣ ಹಾಳಾಗಲಿದೆ. ಕಳೆದ ವರ್ಷ ಪ್ರಥಮ ಪಿಯುಸಿಯಲ್ಲಿದ್ದ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಂ ಬರೆಯಬೇಕು. ತರಗತಿಗಳೇ ನಡೆಯದಿದ್ದರೆ, ಅವರು ಎಕ್ಸಾಂ ಬರೆಯೋದಾದರೂ ಹೇಗೆ ಎನ್ನುವುದು ಪೋಷಕರ ಅಳಲು ತೋಡಿಕೊಂಡರು.
ನವೋದಯ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಬದಲು ಬೇರೆಡೆ ಕೇಂದ್ರ ತೆರೆಯಲಿ. ಇಲ್ಲದಿದ್ದರೆ ಶಾಲೆ ಮುಚ್ಚುವ ಬದಲು ನಮ್ಮ ಎಲ್ಲ ಮಕ್ಕಳ ವರ್ಗಾವಣೆ ಪತ್ರವನ್ನು ಸಾಮೂಹಿಕವಾಗಿ ಕೊಡಲಿ. ನಾವು ಬೇರೆಡೆ ಎಲ್ಲಾದರೂ ಓದಿಸಿಕೊಳ್ಳುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.