ನರಗುಂದ ಅಮಾಯಕ ಮುಸ್ಲಿಮ್ ಯುವಕನ ಹತ್ಯೆ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಖಂಡನೆ

Prasthutha|


ಬೆಂಗಳೂರು: ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಮುಸ್ಲಿಮ್ ಯುವಕರ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಿ ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಖಂಡನೀಯ. ಕೂಡಲೇ ಪೊಲೀಸ್ ಇಲಾಖೆ ನೈಜ ಅಪರಾಧಿಗಳು ಹಾಗೂ ಅವರಿಗೆ ಪ್ರಚೋದನೆ ನೀಡಿದವರನ್ನು ಬಂಧಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿ ಸದಸ್ಯ ಮೌಲಾನಾ ಜಾಫರ್ ಸಾದಿಕ್ ಫೈಝೀ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಘಪರಿವಾರದ ಕಾರ್ಯಕರ್ತರ ದಾಳಿಯಿಂದಾಗಿ ನರಗುಂದದಲ್ಲಿ ಸಮೀರ್ (18) ಮೃತಪಟ್ಟಿದ್ದು, ಸಂಶೀರ್ ( 19) ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಎರಡು ದಿನಗಳಿಂದ ನರಗುಂದದಲ್ಲಿ ಸಂಘಪರಿವಾರದ ಮುಖಂಡರು ಹರಡುತ್ತಿದ್ದ ಅಶಾಂತಿ ವಾತಾವರಣ, ಕೋಮು ಪ್ರಚೋದನೆಗಳಿಂದ ಪ್ರೇರಿತರಾಗಿ ಈ ಕೊಲೆ ನಡೆದಿದ್ದು, ಇದರ ಸಂಪೂರ್ಣ ಹೊಣೆಯನ್ನು ಪೊಲೀಸ್ ಇಲಾಖೆ ವಹಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಪ್ರಾರಂಭದಲ್ಲೇ ಕೋಮು ಪ್ರಚೋದನೆ ಹರಡುತ್ತಿದ್ದ ಸಂಘಪರಿವಾರದ ಮುಖಂಡರ ಮೇಲೆ ಸರಿಯಾದ ಸಮಯಕ್ಕೆ ಕಠಿಣ ಕಾನೂನು ಕ್ರಮ ಪೊಲೀಸರು ಕೈಗೊಂಡಿದ್ದರೆ ಅಮಾಯಕ ಯುವಕ ಕೊಲೆಯಾಗುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಪೊಲೀಸ್ ಉನ್ನತ ಅಧಿಕಾರಿಗಳು ಮತ್ತು ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳು ಮತ್ತು ಅವರಿಗೆ ಪ್ರಚೋದನೆ ನೀಡಿದವರನ್ನು ಬಂಧಿಸಬೇಕು. ಕರ್ತವ್ಯ ಲೋಪ ವೆಸಗಿದ ಪೊಲೀಸರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ಪರಿಹಾರ ಮೊತ್ತ ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp