ಮಂಗಳೂರು: ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದಾಗ ಕೆಲವು ವಿಕೃತ ಮನಸ್ಸಿನವರು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಸಂಭ್ರಮಿಸಿದ್ದಾರೆ. ಅವರನ್ನು ಕೂಡಲೆ ಗುರುತಿಸಿ ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ಯು. ಟಿ. ಖಾದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅತ್ಯುನ್ನತ ಅಧಿಕಾರಿಯಾಗಿದ್ದ ಬಿಪಿನ್ ರಾವತ್ ಅವರಿಗೆ ಎಲ್ಲ ರೀತಿಯ ಸಂರಕ್ಷಣಾ ವ್ಯವಸ್ಥೆ ಇವೆ. ಹಾಗಿರುವಾಗ ಈ ಅಪಘಾತವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಾವು ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ ಮತ್ತು ವಿಕೃತ ಮನಸ್ಸಿನವರನ್ನು ಶಿಕ್ಷಿಸಬೇಕು. ಬಿಜೆಪಿಯವರು ಯಾರ್ಯಾರನ್ನೋ ದೇಶದ್ರೋಹಿಗಳು ಎನ್ನುತ್ತಾರೆ. ಈಗ ಯಾಕೆ ಇವರಿಗೆ ದೇಶದ್ರೋಹಿಗಳು ಕಾಣಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಇಂತಹ ಘಟನೆ ಬೇರೆ ದೇಶಗಳಲ್ಲಿ ನಡೆದಿದ್ದರೆ ರಕ್ಷಣಾ ಸಚಿವರು ರಾಜೀನಾಮೆ ನೀಡುತ್ತಿದ್ದರು. ಇಲ್ಲಿನ ಕೇಂದ್ರ ಸರಕಾರವು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಿಂದೆ ಜಿಲ್ಲಾಧಿಕಾರಿ ಸೆಂದಿಲ್ ಅವರನ್ನು ಬಿಜೆಪಿ ಮತ್ತು ಸಂಘ ಪರಿವಾರದವರು ದೇಶದ್ರೋಹಿ ಎಂದಿದ್ದರು ಈ ಜನ ಈಗ ಯಾಕೆ ತಣ್ಣಗೆ ಕುಳಿತಿದ್ದಾರೆ ಎಂದು ಯು. ಟಿ. ಖಾದರ್ ಪ್ರಶ್ನಿಸಿದರು. ಜಾಲತಾಣಗಳಲ್ಲಿ ವ್ಯಂಗ್ಯ ಆಡುವವರ ಫೋಟೋ ಬಹಿರಂಗ ಮಾಡಿ, ನೀವೂ ಪ್ರಕಟಿಸಿ, ಅವರ ಮುಖವಾಡ ಕಳಚಿ ಎಂದು ಅವರು ಸವಾಲು ಹಾಕಿದರು.
ಮತಾಂತರ ಕಾನೂನು ತರುವ ಉದ್ದೇಶ ಬಿಜೆಪಿಯ ರಾಜಕೀಯ ಗಿಮಿಕ್ ಆಗಿದ್ದು, ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ. ಈ ಸರಕಾರದಲ್ಲಿ ಒಬ್ಬ ಮಂತ್ರಿ ಹಸ್ತಕ್ಷೇಪ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಶೇಕಡಾ 40ರಷ್ಟು ಕಮಿಷನ್ ಎಂದು ನೇರ ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಇಂತಹ ನೂರಾರು ಸಮಸ್ಯೆಗಳಿಂದ ಜನರ ಗಮನ ತಿರುಗಿಸಲು ಮತಾಂತರ ಕಾಯ್ದೆ, ಅದನ್ನೂ ಕ್ರಿಸ್ಮಸ್ ಕಾಲದಲ್ಲೇ ತರುತ್ತಿದ್ದಾರೆ. ಹಿಂದೆ ಗೋಹತ್ಯೆ ಕಾನೂನು ಅವಸರವಸರವಾಗಿ ತರಲಾಯಿತು. ಆದರೂ ಗೋಹತ್ಯೆ ನಿಂತಿಲ್ಲ, ವಿದೇಶಗಳಿಗೆ ಭಾರತದಿಂದ ಅತಿ ಹೆಚ್ಚು ಗೋಮಾಂಸ ರಫ್ತಾಗುತ್ತಿದೆ. ಆದ್ದರಿಂದ ಕಾನೂನು ಮುಖ್ಯವಲ್ಲ, ಅದರ ಜಾರಿ ಮುಖ್ಯ ಎಂದು ಹೇಳಿದರು.
ಹಿಂದೆ ಕ್ರಿಶ್ಚಿಯನರು ಈ ಸುತ್ತಿನಲ್ಲಿ ಶಾಲೆ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ್ದರಿಂದ ನಾವೆಲ್ಲ ಚೆನ್ನಾಗಿದ್ದೇವೆ. ಹಿಂದೆ ಹಿಂದೂಗಳೆಲ್ಲ ಆ ಶಾಲೆ, ಆಸ್ಪತ್ರೆಗಳಿಗೇ ಹೋಗಿದ್ದಾರೆ. ಕುಷ್ಠ ರೋಗದಂತಹ ಕಾಯಿಲೆಗೆ ಫಾದರ್ ಮುಲ್ಲರ್ನಲ್ಲಿ ಮಾತ್ರ ಜಾತಿ ಮತ ನೋಡದೆ ಚಿಕಿತ್ಸೆ ನೀಡಿದ್ದಾರೆ. ಬಲವಂತದ ಮತಾಂತರಕ್ಕೆ ಈಗಾಗಲೇ ಅವಕಾಶ ಇಲ್ಲ. ಆ ಕಾನೂನು ಸಾಕು. ಅದಕ್ಕೆ ಅಗತ್ಯವಿದ್ದರೆ ತಿದ್ದುಪಡಿ ತನ್ನಿ. ಹೊಸ ಕಾನೂನಿಗೆ ಈಗ ಅವಸರವೇನಿಲ್ಲ ಎಂದು ಖಾದರ್ ತಿಳಿಸಿದರು.