ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರುವ ಪ್ರಸ್ತಾವನೆ ಸರ್ಕಾರದ ಮುಂದೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ಸದ್ಯಕ್ಕೆ ಜಾರಿಗೊಳಿಸುವುದಿಲ್ಲ , ಒಂದು ವಾರದ ಬಳಿಕ ಚರ್ಚಿಸಿ ತೀಮಾ೯ನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕ್ರಿಸ್ ಮಸ್, ಹೊಸ ವಷ೯ಕ್ಕೆ ಪ್ರತ್ಯೇಕ ಮಾಗ೯ಸೂಚಿಯ ಬಿಡುಗಡೆಗೆ ಚಿಂತನೆ ನಡೆಸಿದ್ದು, ವಸತಿ ಶಾಲೆ, ಶಾಲಾ ಕಾಲೇಜುಗಳಿಗೆ ಬಿಗಿ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು. ಒಮಿಕ್ರಾನ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ್ ಅವರ ಜೊತೆ ಚರ್ಚೆ ಮಾಡಿದ್ದು,ಈಗಿರೋ ಪಾಸಿಟಿವಿಟಿ ಬಗ್ಗೆ ಗಾಬರಿ ಆಗುವುದು ಬೇಡ ಎಂದು ಹೇಳಿದ್ದಾರೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆಯುವಂತೆ ಸಲಹೆ ನೀಡಿದ್ದಾರೆ ಎಂದರು.
ರಾಜ್ಯದ ಹಾಸ್ಟೆಲ್ ಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದೇವೆ. ಎಲ್ಲರೂ ಒಂದೇ ಬಾರಿ ಎಲ್ಲರೂ ಊಟಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ. ಹಾಸ್ಟೆಲ್ ವಾರ್ಡನ್, ಅಡುಗೆಯವರಿಗೆ ಎರಡು ಡೋಸ್ ವ್ಯಾಕ್ಸಿನ್ ಹಾಕಿಸುವಂತೆ ಸೂಚನೆ ನೀಡಿದ್ದು, ಮೂರು ಕೋವಿಡ್ ಪ್ರಕರಣಗಳು ದಾಖಲಾದರೂ ಆ ಪ್ರದೇಶವನ್ನು ಕ್ಲಸ್ಟರ್ ಎಂದು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ವ್ಯಾಕ್ಸಿನ್ ಡ್ರೈವ್ ಮಾಡಲು ನಿರ್ಧಾರ ಕೈಗೊಂಡಿದ್ದೇವೆ. ಲಸಿಕೆ ಪಡೆಯದವರಿಗೆ ಲಸಿಕೆ ಹಾಕಿಸುವ ಪ್ರಯತ್ನ ಮಾಡುತ್ತೇವೆ. ಅಲ್ಲದೇ ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ಇದ್ದು, ಗಡಿ ಪ್ರದೇಶಗಳಿಂದ ಆಗಮಿಸುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯಗೊಳಿಸಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.