ಬಂಡಾಯದ ಹೆಸರಿನಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಯನ್ನು ನಿಲ್ಲಿಸಿ: ಪಾಪ್ಯುಲರ್ ಫ್ರಂಟ್

Prasthutha|

ಹೊಸದಿಲ್ಲಿ: ನಾಗಲ್ಯಾಂಡ್ ನಲ್ಲಿ ವಿಶೇಷ ಸೇನಾ ಪಡೆಗಳು ನಾಗರಿಕರನ್ನು ಹತ್ಯೆಗೈದಿರುವುದು ಭಯಾನಕವಾಗಿದೆ ಮತ್ತು ಈ ಘಟನೆಯು ಬಿಜೆಪಿ ಆಡಳಿತದಲ್ಲಿ ಮಾನವ ಜೀವಗಳಿಗೆ ಬೆಲೆಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

- Advertisement -

ಹತ್ಯೆಗೊಳಗಾದ ಗ್ರಾಮಸ್ಥರು ದಿನಗೂಲಿ ಕಾರ್ಮಿರಾಗಿದ್ದರು. ಅವರು ಆದಿತ್ಯವಾರದ ದಿನವನ್ನು ಕುಟುಂಬದೊಂದಿಗೆ ಕಳೆಯಲು, ಕಲ್ಲಿದ್ದಲು ಗಣಿಗಾರಿಕೆಯ ತಮ್ಮ ಕಾರ್ಯಸ್ಥಳದಿಂದ ವಾರಾಂತ್ಯದ ವೇಳೆಗೆ ಟ್ರಕ್ಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ರಾಜ್ಯದ ಪೊಲೀಸರು ತಮ್ಮ ಎಫ್.ಐ.ಆರ್.ನಲ್ಲಿ ಆರೋಪಿಸಿರುವಂತೆ, ಸೇನೆಯು ಬಹಿರಂಗವಾಗಿ ಗುಂಡು ಹಾರಿಸಿದೆ ಮತ್ತು ರಕ್ಷಣಾ ಪಡೆಗಳ ಉದ್ದೇಶವು ನಾಗರಿಕರ ಹತ್ಯೆ ಮತ್ತುಅವರನ್ನು ಗಾಯಗೊಳಿಸುವುದಾಗಿತ್ತು ಎಂದು ಆರೋಪಿಸಿದೆ. ಈ ಕಾರ್ಯಾಚರಣೆಯು ಸಂಪೂರ್ಣ ಕಾನೂನುಬಾಹಿರವಾಗಿದೆ. ಸಶಸ್ತ್ರ ಪಡೆಗಳು ಅನುಭವಿಸುತ್ತಿರುವ ನಿರ್ಭೀತಿ ಮತ್ತು ಅಧಿಕಾರದ ಅತಿಯಾದ ಬಳಕೆ ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರಕಾರ ಮತ್ತು ಗೃಹ ಮಂತ್ರಿಯಾಗಿ ಅಮಿತ್ ಶಾ ಮೌಖಿಕವಾಗಿ ನೀಡಿರುವ ಆಶ್ವಾಸನೆಗಳು ಮತ್ತು ಈಶಾನ್ಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಪ್ರತಿಪಾದನೆಗಳ ಹೊರತಾಗಿಯೂ, ಇದರಲ್ಲಿ ಸ್ವತಃ ಅವರು ವೈಫಲ್ಯ ಕಂಡಿರುವುದು ಸಾಬೀತಾಗಿದೆ. ಗೃಹ ಸಚಿವ ಮತ್ತು ರಕ್ಷಣಾ ಮಂತ್ರಿಯವರು ಕೇವಲ ಕಳವಳ ವ್ಯಕ್ತಪಡಿಸುವ ಮೂಲಕ ಈ ಬರ್ಬರ ಹತ್ಯಾಕಾಂಡದ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಸಂತ್ರಸ್ತರಿಗೆ ನ್ಯಾಯವನ್ನು ಖಾತರಿಪಡಿಸಬೇಕೆಂದು ಒ.ಎಂ.ಎ.ಸಲಾಂ ಹೇಳಿದ್ದಾರೆ.

- Advertisement -

ಎ.ಎಫ್.ಎಸ್.ಪಿ.ಎ.ಯಂತಹ ಕಾನೂನುಗಳ ಪೋಷಾಕಿನಡಿಯಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಗಳು ನಡೆಸುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿ ಈಶಾನ್ಯ ರಾಜ್ಯಗಳು ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಮಾಯಕ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುವ ಮತ್ತು ಅವರನ್ನು ಅಮಾನವೀಯವಾಗಿ ನಡೆಸುವ ಇಂತಹ ಕಾನೂನುಗಳನ್ನು ಅಂತ್ಯಗೊಳಿಸಲು ಇದು ಸಕಾಲವಾಗಿದೆ. ನಾವು ಅವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇವೆ ಮತ್ತು ಎ.ಎಫ್.ಎಸ್.ಪಿ.ಎ.ಯಂತಹ ಕರಾಳ ಕಾನೂನುಗಳ ವಿರುದ್ಧ ಈಶಾನ್ಯ ಪ್ರದೇಶಗಳ ಜನರು ನಡೆಸುತ್ತಿರುವ ಹೋರಾಟದೊಂದಿಗೆ ಐಕಮತ್ಯ ವ್ಯಕ್ತಪಡಿಸುತ್ತಿದ್ದೇವೆ ಎಂದು ಒ.ಎಂ.ಎ.ಸಲಾಂ ಹೇಳಿದ್ದಾರೆ.



Join Whatsapp