►ಆತ್ಮರಕ್ಷಣೆಗಾಗಿ ಗುಂಡಿಕ್ಕಿದ್ದಾಗಿ ಕೇಂದ್ರ ಗೃಹ ಸಚಿವರ ಹೇಳಿಕೆ!
ನವದೆಹಲಿ: ನಾಗಲ್ಯಾಂಡ್ನಲ್ಲಿ ನಾಗರಿಕರನ್ನು ಹತ್ಯೆಗೈದ ಭದ್ರತಾ ಪಡೆಗಳ ಕೃತ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸಮರ್ಥಿಸಿದ್ದಾರೆ.
ನಾಗಲ್ಯಾಂಡ್ನಲ್ಲಿ ಪ್ರಸ್ತುತ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆತ್ಮರಕ್ಷಣೆಗಾಗಿ ಸೇನೆ ಗುಂಡು ಹಾರಿಸಿದೆ ಎಂದು ಹೇಳಿಕೆ ನೀಡಿದ್ದಾರೆ.
ಮೊನ್ ಜಿಲ್ಲೆಯಲ್ಲಿ ಉಗ್ರರ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿದ್ದು, ಇದರ ಆಧಾರದ ಮೇಲೆ 21 ಕಮಾಂಡೋಗಳು ಅನುಮಾನಾಸ್ಪದ ಪ್ರದೇಶಕ್ಕೆ ಹೋಗಿದ್ದರು. ವಾಹನವೊಂದು ಅನುಮಾನಾಸ್ಪದ ರೀತಿಯಲ್ಲಿ ಸೇನೆ ಇರುವ ಸ್ಥಳಕ್ಕಾಗಮಿಸಿದ್ದು, ಕಮಾಂಡೋಗಳು ನಿಲ್ಲಿಸಲು ಸೂಚಿಸಿದಾಗ ಪರಾರಿಯಾಗಲು ಯತ್ನಿಸಿದೆ. ವಾಹನದಲ್ಲಿ ಉಗ್ರರಿದ್ದಾರೆ ಎಂದು ಶಂಕಿಸಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನಾಗಲ್ಯಾಂಡ್ನಲ್ಲಿ ಭದ್ರತಾ ಪಡೆಗಳ ಗುಂಡಿಗೆ 14 ನಾಗರಿಕರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, 21 ಪ್ಯಾರಾ ವಿಶೇಷ ಪಡೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.