” ಬಾಬ್ರಿ ಮಸೀದಿ ನಾಶವಾದ ಕಡೆ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸುವ ವಿರೋಧ ಪಕ್ಷಗಳು ಮೋದಿತ್ವವನ್ನು ಸೋಲಿಸಬಲ್ಲವೇ?

Prasthutha|


2019ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ-ಭಾಗವತ್-ಅದಾನಿ ಆಳ್ವಿಕೆ ಆರ್ಟಿಕಲ್ 370 ರದ್ದು, ಮಂದಿರ ನಿರ್ಮಾಣ, CAA-NRC, ಕಾರ್ಪೊರೇಟ್ ಪರ ಆಕ್ರಮಣ ಕಾರಿ ಕೃಷಿ, ಶಿಕ್ಷಣ ಕಾರ್ಮಿಕ, ಪರಿಸರ… ಇತ್ಯಾದಿ ನೀತಿಗಳನ್ನು ಜಾರಿಗೆ ತಂದು ದೇಶದ ಮೇಲೆ, ಜನರ ಮೇಲೆ ಯುದ್ಧ ಸಾರಿದೆ…
ಹೀಗಾಗಿ 2024ರ ಚುನಾವಣೆಯಲ್ಲಿ ಮತ್ತೆ ಮೋದಿ-ಬಿಜೆಪಿ-ಆರೆಸ್ಸೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಹಾಗೂ ಈ ದೇಶದ ತಳಸಮುದಾಯದ ಜನಗಳ ಭವಿಷ್ಯ ಏನಾದೀತು ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ಆ ಒತ್ತಡದಿಂದಲೇ, ಕಳೆದ ಬಾರಿ ಬಿಜೆಪಿ ವಿರೋಧಿ ಓಟುಗಳು ವಿಭಜನೆಯಾಗಬಾರದು ಎಂದು ವಿಶೇಷವಾಗಿ ಉ.ಪ್ರದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಪ್ರಮುಖ ವಿರೋಧ ಪಕ್ಷಗಳು ಒಟ್ಟಾಗಿ ಚುನಾವಣಾ ಎದುರಿಸುವ ಅರೆಮನಸ್ಸಿನ ಪ್ರಯತ್ನ ಮಾಡಿದವು. ಆದರೆ ಅದರ ಪರಿಣಾಮ ಎಷ್ಟು ವಿನಾಶಕಾರಿಯಾಗಿತ್ತು ಎಂಬುದನ್ನು ಫಲಿತಾಂಶಗಳೇ ತೋರಿಸಿಕೊಟ್ಟವು.

- Advertisement -


ಏಕೆ ಹಾಗಾಯಿತು?
ಈ ವಿರೋಧ ಪಕ್ಷಗಳು ನಿಜಕ್ಕೂ ಮೋದಿತ್ವವನ್ನು ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ವಿರೋಧಿಸುವ ರಾಜಕೀಯ – ಸೈದ್ಧಾಂತಿಕ ಸತ್ವವನ್ನು ಉಳಿಸಿಕೊಂಡಿವೆಯೇ?
ಒಂದೆರೆಡು ಉದಾಹರಣೆಗಳನ್ನು ನೋಡೋಣ…


2019 ರ ಆಗಸ್ಟ್ 5 ರಂದು ಆರ್ಟಿಕಲ್ 370 ಅನ್ನು ರದ್ದು ಮಾಡುವ ಹಾಗೂ ಕಾಶ್ಮೀರವನ್ನು ವಿಭಜಿಸುವ ಮತ್ತು ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಳ್ಳುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಾಯಿತು. ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ NDA ಗೆ ಬಹುಮತವಿತ್ತು. ಆದರೆ ರಾಜ್ಯಾ ಸಭೆಯಲ್ಲಿ ಬಿಜೆಪಿಯಾ 75 ಸದಸ್ಯರ ಜೊತೆಗೆ ಒಟ್ಟಾರೆ NDA ಗೆ ಇದ್ದ ಸಂಖ್ಯಾಬಲ ಕೇವಲ 104 . ಆದರೂ ರಾಜ್ಯಸಭೆಯಲ್ಲಿ ಈ ಅಪ್ರಜಾತಾಂತ್ರಿಕ ಮಸೂದೆಗೆ ಬಿಜೆಪಿ 125 ಮತಗಳನ್ನು ಪಡೆದುಕೊಂಡು ಯಶಸ್ವಿಯಾಗಿ ಮಸೂದೆಯನ್ನು ಕಾಯಿದೆಯನ್ನಾಗಿಸಿತು. ಏಕೆಂದರೆ BJP-NDA ವಿರೋಧಿ ಪಕ್ಷಗಳೆಂದು ಚಾಲ್ತಿಯಲ್ಲಿರುವ ಆಮ್ ಆದ್ಮಿ ಪಾರ್ಟಿ (AAP), ತೆಲುಗು ದೇಶಂ ಪಾರ್ಟಿ (TDP) ಮತ್ತು ಬಹುಜನ ಸಮಾಜ್ ಪಾರ್ಟಿ (BSP) ಗಳು ಈ ಮಸೂದೆಯನ್ನು ಬೆಂಬಲಿಸಿದರೆ…

- Advertisement -


ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಾರ್ಟಿ (TMC) ಮತ್ತು ಶರದ್ ಪವಾರರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಸದನದಿಂದ ಹೊರನಡೆದು ಸಂಖ್ಯಾಬಲವು ಬಿಜೆಪಿಯಾ ಪರವಾಗಲು ಪರೋಕ್ಷವಾಗಿ ಸಹಕರಿಸಿದವು! ಅದೇ ರೀತಿ CAA ಮಸೂದೆಯನ್ನು ಪಾಸುಮಾಡಿಸಿಕೊಳ್ಳಲು ಬಿಜೆಪಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ 121 ಮತಗಳ ಅಗತ್ಯವಿತ್ತು. ಒಟ್ಟಾರೆ NDAಗೆ ರಾಜ್ಯಸಭೆಯಲ್ಲಿ ಕೇವಲ 104 ಸದಸ್ಯ ಬಲವಿದ್ದರೂ ಮೋದಿ ಸರ್ಕಾರ ಮಸೂದೆಯ ಪರವಾಗಿ 125 ಮತಗಳನ್ನು ಪಡೆದುಕೊಂಡು ಕಾಯಿದೆ ಮಾಡುವಲ್ಲಿ ಯಶಸ್ವಿಯಾಯಿತು. ಏಕೆಂದರೆ ಅಣ್ಣ ಡಿಎಂಕೆ (AIADMK), ಜನತಾ ದಳ ಯುನೈಟೆಡ್ (JDU), ಒರಿಸ್ಸಾದ ಬಿಜು ಜನತಾ ದಳ (BJD) CAA ಮಸೂದೆಯ ಪರವಾಗಿ ಓಟು ಹಾಕಿದವು.
ಅದೇ ಸಮಯದಲ್ಲಿ ಶಿವಸೇನಾ, NCP ಮತ್ತು BSP ಗಳು ಸದನದಿಂದ ಹೊರನಡೆದು ಸದನದ ಸಂಖ್ಯಾಬಲವು ಬಿಜೆಪಿಯ ಪರವಾಗಿ ಉಳಿದುಕೊಳ್ಳುವಂತೆ ಸಹಕರಿಸಿದವು.


ಇನ್ನು ಕಳೆದ ಆಗಸ್ಟಿನಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಡೆದ ಕಾರ್ಯಕ್ರಮಕ್ಕೆ ಪೂರಕವಾಗಿ ದೇಶಾದ್ಯಂತ ನಡೆದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖವಾಗಿ ಭಾಗವಹಿಸಿದ್ದಲ್ಲದೆ ರಾಜಸ್ಥಾನದ ಯುವ ಕಾಂಗ್ರೆಸ್ಸಿಗರು ರಾಮಮಂದಿರ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ. 2003 ರಲ್ಲಿ ನಡೆದ ಸರ್ಕಾರ ಜಾರಿ ಮಾಡಿದ NPR-NRC ಮಸೂದೆಯನ್ನು ಹಿಂತೆಗೆದುಕೊಳ್ಳುವ ಎಲ್ಲಾ ಅವಕಾಶವು 2004-2014 ರ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ UPA ಪಕ್ಷಗಳ ಕೂಟದ ಸರ್ಕಾರಕ್ಕಿತ್ತು. ಆದರೂ ಅದನ್ನು ಹಿಂತೆಗೆದುಕೊಳ್ಳುವುದಿರಲಿ, 2009ರಲ್ಲಿ VISA ಷರತ್ತುಗಳ ತಿದ್ದುಪಡಿ ರೂಪಿಸಬೇಕಾದರೆ ಬಿಜೆಪಿಯ CAA ವಿಧಿಸಿದ ಶರತ್ತುಗಳನ್ನೇ UPA ಸರ್ಕಾರ ಕೂಡ ವಿಧಿಸಿ, CAA ಗೆ ಭೂಮಿಕೆಯನ್ನು ನಿರ್ಮಿಸಿತು.


ವಿದ್ಯುತ್ ಸುಧಾರಣಾ ಕಾಯಿದೆ, ಈಗ ಸರ್ಕಾರ ಹಿಂತೆಗೆದುಕೊಂಡಿರುವ ರೈತ ವಿರೋಧಿ ಕಾಯಿದೆಗಳ ಮೂಲ- ಆದರೆ ದುರ್ಬಲ-ಸ್ವರೂಪಗಳು UPA ಕಾಲದಲ್ಲೇ ಜಾರಿಯಾಗಿತ್ತು. ಈ ಎಲ್ಲಾ ಕಾಯಿದೆಗಳು ಜಾರಿಯಾಗುವಾಗ ಕಮ್ಯುನಿಸ್ಟ್ ಪಕ್ಷಗಳೂ UPA ಸರ್ಕಾರದ ಜೊತೆಗಿದ್ದವು. ಇನ್ನು ಜೆಡಿಎಸ್ ಪಕ್ಷದ ಒಬ್ಬ ನಾಯಕ ಆರೆಸ್ಸೆಸ್ ಬಗ್ಗೆ ಕೊಟ್ಟ ಹೇಳಿಕೆಯ ಶಾಯಿ ಮಾಸುವ ಮುನ್ನ ಅದರ ಅಧಿನಾಯಕ ಮೋದಿತ್ವದ ಗುಣಗಾನ ಮಾಡುತ್ತಾರೆ. ಈಗಂತೂ ಉತ್ತರ ಪ್ರದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳು ತಮ್ಮ ಚುನಾವಣೆಯ ಪ್ರಚಾರವನ್ನು ಹೆಚ್ಚೂ ಕಡಿಮೆ ಅಯೋಧ್ಯೆಯಿಂದಲೇ ಪ್ರಾರಂಭಿಸಿವೆ. ಆಮ್ ಆದ್ಮಿ, ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳಂತೂ ಬಿಜೆಪಿ ಸರ್ಕಾರಕ್ಕಿಂತ ವೇಗವಾಗಿ, ಭವ್ಯವಾಗಿ ರಾಮಮಂದಿರ ಕಟ್ಟುವ ಭರವಸೆ ನೀಡಿವೆ.


ಕಾರಣವೇನು?
ಬಹುಪಾಲು ವಿರೋಧ ಪಕ್ಷಗಳ ಬೆಂಬಲಿಗ ಸಮುದಾಯಗಳು ಶೂದ್ರ-ದಲಿತ-ಅಬ್ರಾಹ್ಮಣ ಹಿನ್ನೆಲೆಯವರೆ ಆಗಿದ್ದರೂ, ಆ ಸಮುದಾಯಗಳ ಮೇಲ್ ಸ್ತರಗಳು ಮಾತ್ರ ಮೋದಿತ್ವ ಪ್ರತಿನಿಧಿಸುವ ಬ್ರಾಹ್ಮಣೀಕರಣ, ಮತ್ತು ಕಾರ್ಪೊರೇಟೀಕರಣದ ಗೇಟ್ ಕೀಪರ್ ಗಳು ಮಾತ್ರವಲ್ಲದೇ, ಫಲಾನುಭವಿಗಳು ಮತ್ತು ಬೆಂಬಲಿಗರೇ ಆಗಿದ್ದಾರೆ.
ಹೀಗಾಗಿಯೇ ಪ್ರಾದೇಶಿಕ ಸ್ವರೂಪದ ಪಕ್ಷಗಳ ಬಹುಪಾಲು ಬೆಂಬಲಿಗರು ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಸಮುದಾಯದ / ಪಕ್ಷದ ನಾಯಕನೇ ಮುಖ್ಯಮಂತ್ರಿಯಾಗಬೇಕೆಂದರೂ “ಹಿಂದೂ ರಾಷ್ಟ್ರದ ಹಿತ” ದೃಷ್ಟಿಯಿಂದ ಮೋದಿಯೇ ರಾಷ್ಟ್ರ ದ ಪ್ರಧಾನ ಮಂತ್ರಿಯಾಗಬೇಕೆಂದು ಬಯಸುತ್ತಾರೆ.
ಆದ್ದರಿಂದಲೇ, ಎಲ್ಲಾ ಪ್ರಾದೇಶಿಕ ಪಕ್ಷಗಳೂ ಒಂದಲ್ಲ ಒಂದು ಬಾರಿ NDA ಜೊತೆ ಯಾವುದೇ ಶರತ್ತಿಲ್ಲದೆ ಅಧಿಕಾರ ಹಂಚಿಕೊಂಡಿದ್ದವು.


ಮಮತಾ ಬ್ಯಾನರ್ಜಿ ಮತ್ತು ಮಾಯಾವತಿಯವರಂತೂ ಗುಜರಾತ್ ನರಮೇಧ ನಡೆದಾಗಲೂ ಮೋದಿಯನ್ನು ಸಮರ್ಥಿಸಿಕೊಂಡಿದ್ದರು. ಆದ್ದರಿಂದಲೇ ಈಗಿನ ಮಾಯಾವತಿಯವರ ಮೌನ, ಮಮತಾ ಬ್ಯಾನರ್ಜಿಯವರ ದಾಳಿಯ ಆದ್ಯತೆಗಳು ಹಲವಾರು ಅನುಮಾನಗಳನ್ನು ಹುಟ್ಟಿಸುತ್ತವೆ.
ಇವು ಕೇವಲ ಕೆಲವು ಉದಾಹರಣೆಗಳಷ್ಟೇ. ಹೀಗಾಗಿ ನಮ್ಮ ವಿರೋಧ ಪಕ್ಷಗಳು, RSS-BJP ಗಳು ಸಮಾಜದಲ್ಲಿ ಹುಟ್ಟುಹಾಕಿರುವ “ಹಿಂದೂ ರಾಷ್ಟ್ರ ಸಿದ್ಧಾಂತದ ” ಹೆಜಿಮನಿಯನ್ನು ಹಿಮ್ಮೆಟ್ಟಿಸಿ ಪರ್ಯಾಯವನ್ನು ಮುಂದಿಡುವುದಿರಲಿ ಹಿಂದೂರಾಷ್ಟ್ರ ನಿರ್ಮಾಣದ ನೀತಿ, ಕಾರ್ಯಕ್ರಮಗಳಿಗೆ ಪರೋಕ್ಷ ಹಾಗೂ ಪ್ರತ್ಯಕ್ಷ ಸಮ್ಮತಿಯನ್ನು ನೀಡುತ್ತಾ ಬಂದಿವೆ…
ಆದ್ದರಿಂದಲೇ ಕೋಮುವಾದಿ ಧ್ರುವೀಕರಣದ ಮೂಲಕ RSS-BJP ಸೃಷ್ಟಿಸಿರುವ ಹಿಂದೂ ಓಟ್ ಬ್ಯಾಂಕಿನ ರಾಜಕಾರಣವನ್ನು ಎದುರಿಸುವ ಸೈದ್ಧಾಂತಿಕ , ರಾಜಕೀಯ ಹಾಗೂ ಸಾಂವಿಧಾನಿಕ ಎದೆಗಾರಿಕೆಯನ್ನು ಮತ್ತು ದೂರದೃಷ್ಟಿಯನ್ನು ಯಾವ ಪಕ್ಷಗಳೂ ತೋರುತ್ತಿಲ್ಲ.
ಹೀಗಾಗಿ ಇಂದು ಹಲವು ಪ್ರಶ್ನೆಗಳು ಎದುರಾಗುತ್ತವೆ…
ಇಂದು, ಈ ದೇಶವನ್ನು ಉಳಿಸಲು ವಿರೋಧ ಪಕ್ಷಗಳು ಬಿಜೆಪಿಯ ಚುನಾವಣಾ ವಿರೋಧಿಯಾದರೆ ಸಾಕೆ?
ಅಥವಾ ಈ ದೇಶವನ್ನು ಇಂದಿನ ಸ್ಥಿತಿಗೆ ತರಲು ಕಾರಣವಾದ ಬ್ರಹ್ಮಣವಾದ- ಬಂಡವಾಳವಾದ- ಹಾಗೂ ಪ್ಯಾಸಿಸ್ಟ್ ಹಿಂದೂತ್ವ ರಾಜಕಾರಣದ ವಿರುದ್ಧ ನೈಜ ಸೈದ್ಧಾಂತಿಕ ಹಾಗೂ ರಾಜಕೀಯ ನೆಲೆಯ

ವಿರೋಧಿಗಳು ಆಗಿರಬೇಕೆ?
ಹಾಗಿಲ್ಲದಾಗ, ವಿರೋಧ ಪಕ್ಷಗಳ ರಾಜಕಾರಣ ಹಿಂದುತ್ವ-ಮೋದಿತ್ವದ ಹೆಜಿಮೊನಿಯನ್ನು ಸೋಲಿಸುವುದಿರಲಿ ಪೂರಕವಾಗಿ ಕೆಲಸ ಮಾಡುವುದಿಲ್ಲವೇ ? ಅಲ್ಲದೇ, ಕೇವಲ ಚುನಾವಣೆಗೆ ಮುಂಚೆ ಹುಟ್ಟಿ ಚುನಾವಣೆಯ ನಂತರ ದೀರ್ಘ ನಿದ್ರೆಗೆ ಮರಳುವ ವಿರೋಧ ಪಕ್ಷಗಳ ಚುನಾವಣಾ ಐಕ್ಯತೆ ಹಿಂದುತ್ವ ರಾಜಕಾರಣವನ್ನು ಸೋಲಿಸುವುದಿರಲಿ, ಬಿಜೆಪಿಯನ್ನು ಚುನಾವಣೆಯಲ್ಲಾದರೂ ಸೋಲಿಸಬಲ್ಲದೇ?
ಒಂದು ಪ್ರಬಲವಾದ ಜನಪರ , ಸೈದ್ಧಾಂತಿಕ , ರಾಜಕೀಯ ಚಳವಳಿಯನ್ನು ಬುಡಮಟ್ಟದಿಂದ ಕಟ್ಟದೆ ಈ ವಿರೋಧವಿಲ್ಲದ ವಿರೋಧಪಕ್ಷಗಳನ್ನು ನೆಚ್ಚಿಕೊಂಡು ಹಿಂದುತ್ವವನ್ನು ಸೋಲಿಸಬಹುದೇ? ಪ್ರಜಾತಂತ್ರವನ್ನು ಉಳಿಸಬಹುದೇ?

Join Whatsapp