ಮೊಬೈಲ್ ಬ್ಯಾಟರಿ ಸ್ಫೋಟ: 12 ವರ್ಷ ಹರೆಯದ ಬಾಲಕನ ಸ್ಥಿತಿ ಗಂಭೀರ

Prasthutha|

ಮಧ್ಯಪ್ರದೇಶ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡು 12 ವರ್ಷ ಹರೆಯದ ಬಾಲಕ ಗಂಭೀರ ಗಾಯಗೊಂಡ ಘಟನೆ ಮಧ್ಯಪ್ರದೇಶದ ಚಾತಾರ್’ಪುರ್ ಎಂಬಲ್ಲಿ ನಡೆದಿದೆ. ಬ್ಯಾಟರಿ ಸ್ಫೋಟದಿಂದಾಗಿ ಬಾಲಕನ ಕರುಳು ಹಾಗೂ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದೆ.

- Advertisement -

ಮಧ್ಯಪ್ರದೇಶದ ಚಾತಾರ್’ಪುರ್’ನ ಕುರ್ರಾ ಗ್ರಾಮದ ನಿವಾಸಿ 4ನೇ ತರಗತಿಯಲ್ಲಿ ಓದುತ್ತಿದ್ದ ಅಫ್ಝಲ್ ಖಾನ್, ಮನೆ ಸಮೀಪ ನಡೆದುಕೊಂಡು ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ  ಮೊಬೈಲ್ ಬ್ಯಾಟರಿಯೊಂದು ಬಿದ್ದಿರುವುದು ಕಾಣಿಸಿದೆ. ಆ ಬ್ಯಾಟರಿಯನ್ನು ಮನೆಗೆ ತಂದ ಅಫ್ಝಲ್, ಬೇರೆ ಕೇಬಲ್ ಬಳಸಿ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದೆ.

ಸ್ಫೋಟದಿಂದಾಗಿ ಗಂಭೀರ ಗಾಯಗೊಂಡಿದ್ದ ಅಫ್ಝಲ್’ನನ್ನು ತಾಯಿ ರುಕ್ಶಾರ್ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯ ವಿಪಿ. ಶೇಷಾರವರ ಪ್ರಕಾರ ಬಾಲಕ ಅಫ್ಝಲ್ ಖಾನ್ ಸ್ಥಿತಿ ಚಿಂತಾಜನಕವಾಗಿದೆ. ಅಫ್ಝಲ್’ನ ದೇಹದಲ್ಲಿ ಆಳವಾದ ಗಾಯವಾಗಿದ್ದು, ದೇಹದ ಆಂತರಿಕ ಭಾಗಗಳು ತೀವ್ರವಾಗಿ ಹಾನಿಗೊಂಡಿದೆ. ಬ್ಯಾಟರಿಯ ತುಂಡುಗಳು ಬಾಲಕನ ಕರುಳು ಹಾಗೂ ಶ್ವಾಸಕೋಶವನ್ನು ಪ್ರವೇಶಿಸಿದೆ. ಹೀಗಾಗಿ ವಿಪರೀತ ರಕ್ತ ಹೊರಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಕೈ, ಕಾಲು, ಹೊಟ್ಟೆ, ಬಾಯಿ ಹಾಗೂ ಹೃದಯದ ಭಾಗಗಳಲ್ಲೂ ಗಾಯಗಳಾಗಿದೆ ಎಂದು ವಿಪಿ. ಶೇಷಾರವರು ಹೇಳಿದ್ದಾರೆ



Join Whatsapp