ಚುಟುಕು ಕ್ರಿಕೆಟ್’ನ ವಿಶ್ವಕಿರೀಟ ಗೆದ್ದ ಆಸ್ಟ್ರೇಲಿಯಾ !

Prasthutha|

ದುಬೈ: 5 ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಚುಟುಕು ಕ್ರಿಕೆಟ್’ನ ವಿಶ್ವಚಾಂಪಿಯನ್ ಪಟ್ಟದಲ್ಲಿ ವಿರಾಜಮಾನವಾಗಿದೆ. ದುಬೈ’ನಲ್ಲಿ ನಡೆದ T-20 ವಿಶ್ವಕಪ್ ಫೈನಲ್ ಫೈಟ್’ನಲ್ಲಿ ನ್ಯೂಜಿಲೆಂಡ್ ನೀಡಿದ್ದ 173 ರನ್’ಗಳ ಸವಾಲಿನ ಗುರಿಯನ್ನು ಕೇವಲ 2 ವಿಕೆಟ್ ನಷ್ಟದಲ್ಲಿ 18.5 ಓವರ್’ಗಳಲ್ಲಿ ನಿರಾಯಾಸವಾಗಿಯೇ ಬೆನ್ನಟ್ಟಿದ ಆಸ್ಟ್ರೇಲಿಯಾ ಮೊದಲ ಬಾರಿಗೆ T-20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ.

- Advertisement -

2010ರಲ್ಲಿ ಆಸ್ಟ್ರೇಲಿಯಾ T-20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತಾದರೂ, ಇಂಗ್ಲೆಂಡ್ ವಿರುದ್ಧ ಸೋಲು ಕಾಣುವಂತಾಗಿತ್ತು. ಇದೀಗ ತನ್ನ ಎರಡನೇ ಫೈನಲ್ ಪ್ರಯತ್ನದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಕನಸನ್ನು ನನಸಾಗಿಸಿದೆ. ಮತ್ತೊಂದೆಡೆ 2019ರಲ್ಲಿ ಏಕದಿನ ವಿಶ್ವಕಪ್’ಫೈನಲ್ ತಲುಪಿ, ಇಂಗ್ಲೆಂಡ್ ವಿರುದ್ಧ ರೋಚಕ ಸೋಲು ಕಂಡಿದ್ದ ನ್ಯೂಜಿಲೆಂಡ್, T-20 ವಿಶ್ವಕಪ್ ಫೈನಲ್’ನಲ್ಲೂ ರನ್ನರ್ ಅಪ್ ಆಗಿ ಮರಳುತ್ತಿದೆ.

ಚೇಸಿಂಗ್ ವೇಳೆ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಒದಗಿಸಿದ ಅನುಭವಿ ಡೇವಿಡ್ ವಾರ್ನರ್ ಹಾಗೂ ಮೂರನೇ ಕ್ರಮಾಂಕದಲ್ಲಿ ಬಂದ ಮಿಚೆಲ್ ಮಾರ್ಶ್ ಆಕರ್ಷಕ ಅರ್ಧ ಶತಕಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 38 ಎಸೆತಗಳನ್ನು ಎದುರಿಸಿದ ವಾರ್ನರ್, 3 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 53 ರನ್’ಗಳಿಸಿದ್ದ ವೇಳೆ ಟ್ರೆಂಟ್ ಬೌಲ್ಟ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಮರಳಿದರು.

- Advertisement -

ಬಹಳದ ಸಮಯದ ಬಳಿಕ ಮಹತ್ವದ ಇನ್ನಿಂಗ್ಸ್ ಆಡಿದ ಮಿಚೆಲ್ ಮಾರ್ಶ್ 77 ರನ್’ಗಳಿಸಿ ಅಜೇಯರಾಗುಳಿದರು. ಮಿಚೆಲ್ ಇನ್ನಿಂಗ್ಸ್ 4 ಭರ್ಜರಿ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಗಳನ್ನು ಒಳಗೊಂಡಿತ್ತು. ಕೊನೆಯಲ್ಲಿ ಮ್ಯಾಕ್ಸ್’ವೆಲ್ 28 ರನ್ ಗಳಿಸಿದರು.  ಫೈನಲ್ ಪಂದ್ಯದಲ್ಲೂ ತನ್ನ ಕಳಪೆ ಫಾರ್ಮ್ ಮುಂದುವರಿಸಿದ ನಾಯಕ ಫಿಂಚ್ ಕೇವಲ 5 ರನ್’ಗಳಿಸಿ ಟ್ರೆಂಟ್ ಬೌಲ್ಟ್’ಗೆ ವಿಕೆಟ್ ಒಪ್ಪಿಸಿದರು.

ಆಸ್ಟ್ರೇಲಿಯಾ ಗೆಲುವಿಗೆ 173 ರನ್’ಗಳ ಗುರಿ ನೀಡಿದ್ದ ನ್ಯೂಜಿಲೆಂಡ್

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 6ನೇ ಬಾರಿಗೆ ಟಾಸ್ ಗೆದ್ದ ಆಸ್ಟ್ರೇಲಿಯಾ, ನಿರೀಕ್ಷೆಯಂತೆಯೇ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು. ನಾಯಕ ಕೇನ್ ವಿಲಿಯಮ್ಸನ್’ರ ಜವಾಬ್ಧಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್’ಗಳಿಸಿದೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಇಳಿದ ನಾಯಕ ನಾಯಕ ಕೇನ್ ವಿಲಿಯಮ್ಸನ್’ 48 ಎಸೆತಗಳನ್ನು ಎದುರಿಸಿ 85 ರನ್’ಗಳಿಸಿ ಔಟಾದರು. ಕೇನ್ ಆಕರ್ಷಕ ಇನ್ನಿಂಗ್ಸ್ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್’ಗಳನ್ನು ಒಳಗೊಂಡಿತ್ತು. ಮಾರ್ಟಿನ್ ಗಪ್ಟಿಲ್ 28 ರನ್’ಗಳಿಸಿ ಆ್ಯಡಮ್ ಸ್ಪಿನ್ ಮೋಡಿಗೆ ಸ್ಟೋಯ್ನಿಸ್’ಗೆ ಕ್ಯಾಚಿತ್ತು ನಿರ್ಗಮಿಸಿದರು.

 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್’ಗಳಿಗೆ ದುಸ್ವಪ್ನವಾಗಿ ಕಾಡಿದ್ದ ಡ್ಯಾರಿಲ್ ಮಿಚೆಲ್ 11 ರನ್’ಗಳಿಸುವಷ್ಟರಲ್ಲಿಯೇ ಹ್ಯಾಝಲ್’ವುಡ್’ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಪಿಲಿಫ್ಸ್18 ರನ್ ಗಳಿಸಿದರೆ ಜೇಮ್ಸ್ ನೀಶಮ್ 13 ರನ್’ಗಳಿಸಿ ಅಜೇಯರಾಗುಳಿದರು.

ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಜೋಶ್ ಹ್ಯಾಝಲ್’ವುಡ್ 4 ಓವರ್’ಗಳಲ್ಲಿ ಕೇವಲ 16 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಆದರೆ 4 ಓವರ್ ಎಸೆದು 60 ರನ್ ಬಿಟ್ಟುಕೊಟ್ಟ ಮಿಚೆಲ್ ಸ್ಟಾರ್ಕ್ ದುಬಾರಿಯಾದರು.

6ನೇ ಬಾರಿಗೆ ಆಸ್ಟ್ರೇಲಿಯಾ ಸಾಥ್ ನೀಡಿದ ಟಾಸ್..! ಟಾಸ್ ವಿನ್ ಮ್ಯಾಚಸ್..!

ದುಬೈ ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಪ್ರಮುಖ ಪಾತ್ರ ವಹಿಸಿದೆ. ಚೇಸ್ ಮಾಡಿದ ತಂಡಗಳೇ ಪಂದ್ಯವನ್ನು ಗೆದ್ದಿವೆ. ರಾತ್ರಿ ಇಬ್ಬನಿ ಸುರಿಯುವುದರಿಂದ ಬೌಲಿಂಗ್ ತಂಡಕ್ಕೆ ಸಮಸ್ಯೆಯಾಗುತ್ತಿದೆ. ಪ್ರಸಕ್ತ ಟೂರ್ನಿಯಲ್ಲಿ ಫೈನಲ್ ಸೇರಿಂತೆ ದುಬೈ ಮೈದಾನದಲ್ಲಿ ನಡೆದ 13 ಪಂದ್ಯಗಳಲ್ಲಿ 12 ರಲ್ಲೂ ಗುರಿ ಬೆನ್ನತ್ತಿದ ತಂಡಗಳೇ ಗೆಲುವು ಸಾಧಿಸಿದೆ.

ಆಸ್ಟ್ರೇಲಿಯಾ ಟೂರ್ನಿಯಲ್ಲಿ 6ನೇ ಬಾರಿ ಟಾಸ್ ಅಧೃಷ್ಟವನ್ನು ತನ್ನದಾಗಿಸಿಕೊಂಡಿತು. ಪ್ರತೀ ಪಂದ್ಯದಲ್ಲೂ ಫೀಲ್ಡಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ಗೆಲುವು ದಾಖಲಿಸುತ್ತಲೇ ಬಂದಿತ್ತು. ಅಂತಿಮವಾಗಿ ಫೈನಲ್ ಪಂದ್ಯದಲ್ಲೂ ಟಾಸ್ ಗೆದ್ದು ಪಂದ್ಯವನ್ನೂ ಗೆದ್ದು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

Join Whatsapp