T-20 ವಿಶ್ವಕಪ್ ಫೈನಲ್: ಆಸ್ಟ್ರೇಲಿಯಾ ಗೆಲುವಿಗೆ 173 ರನ್’ಗಳ ಗುರಿ

Prasthutha|

ದುಬೈ: ಐಸಿಸಿ T-20 ವಿಶ್ವಕಪ್ ಕಿರೀಟಕ್ಕಾಗಿ ದುಬೈ’ನಲ್ಲಿ ನಡೆಯುತ್ತಿರುವ ಫೈನಲ್ ಫೈಟ್’ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ನ್ಯೂಜಿಲೆಂಡ್ 173 ರನ್’ಗಳ ಸವಾಲಿನ ಗುರಿ ನೀಡಿದೆ. ನಾಯಕ ಕೇನ್ ವಿಲಿಯಮ್ಸನ್’ರ ಜವಾಬ್ಧಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್’ಗಳಿಸಿದೆ.

- Advertisement -

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಇಳಿದ ನಾಯಕ ಕೇನ್ ವಿಲಿಯಮ್ಸನ್ 48 ಎಸೆತಗಳನ್ನು ಎದುರಿಸಿ 85 ರನ್’ಗಳಿಸಿ ಔಟಾದರು. ಕೇನ್ ಆಕರ್ಷಕ ಇನ್ನಿಂಗ್ಸ್ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್’ಗಳನ್ನು ಒಳಗೊಂಡಿತ್ತು. ಮಾರ್ಟಿನ್ ಗಪ್ಟಿಲ್ 28 ರನ್’ಗಳಿಸಿ ಆ್ಯಡಮ್ ಸ್ಪಿನ್ ಮೋಡಿಗೆ ಸ್ಟೋಯ್ನಿಸ್’ಗೆ ಕ್ಯಾಚಿತ್ತು ನಿರ್ಗಮಿಸಿದರು.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಿರ್ಣಾಯಕವಾದ ಟಾಸ್ ಗೆದ್ದ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ನಿರೀಕ್ಷೆಯಂತೆಯೇ ಬ್ಯಾಟಿಂಗ್’ಗೆ ಆಹ್ವಾನಿಸಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್’ಗಳಿಗೆ ದುಸ್ವಪ್ನವಾಗಿ ಕಾಡಿದ್ದ ಡ್ಯಾರಿಲ್ ಮಿಚೆಲ್ 11 ರನ್’ಗಳಿಸುವಷ್ಟರಲ್ಲಿಯೇ ಹ್ಯಾಝಲ್’ವುಡ್’ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಪಿಲಿಫ್ಸ್18 ರನ್ ಗಳಿಸಿದರೆ ಜೇಮ್ಸ್ ನೀಶಮ್ 13 ರನ್’ಗಳಿಸಿ ಅಜೇಯರಾಗುಳಿದರು.

- Advertisement -

ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಜೋಶ್ ಹ್ಯಾಝಲ್’ವುಡ್ 4 ಓವರ್’ಗಳಲ್ಲಿ ಕೇವಲ 16 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಆದರೆ 4 ಓವರ್ ಎಸೆದು 60 ರನ್ ಬಿಟ್ಟುಕೊಟ್ಟ ಮಿಚೆಲ್ ಸ್ಟಾರ್ಕ್ ದುಬಾರಿಯಾದರು.

ಫಲಿಸುವುದೇ ಟಾಸ್ ಚಮತ್ಕಾರ ..!?

ದುಬೈ ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಪ್ರಮುಖ ಪಾತ್ರ ವಹಿಸಿದೆ. ಚೇಸ್ ಮಾಡಿದ ತಂಡಗಳೇ ಪಂದ್ಯವನ್ನು ಗೆದ್ದಿವೆ. ರಾತ್ರಿ ಇಬ್ಬನಿ ಸುರಿಯುವುದರಿಂದ ಬೌಲಿಂಗ್ ತಂಡಕ್ಕೆ ಸಮಸ್ಯೆಯಾಗುತ್ತಿದೆ. ಪ್ರಸಕ್ತ ಟೂರ್ನಿಯಲ್ಲಿ ದುಬೈ ಮೈದಾನದಲ್ಲಿ ನಡೆದ 12 ಪಂದ್ಯಗಳಲ್ಲಿ 11 ರಲ್ಲೂ ಗುರಿ ಬೆನ್ನತ್ತಿದ ತಂಡಗಳೇ ಗೆಲುವು ಸಾಧಿಸಿದೆ.

ಸೆಮಿಫೈನಲ್ ಸೇರಿದಂತೆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಐದು ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಪಂದ್ಯವನ್ನೂ ಸೋತಿತ್ತು. ಆದರೆ ಮಧ್ಯಾಹ್ನದ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡು ಗೆಲುವು ಸಾಧಿಸಿತ್ತು.

ಇದೇ ಮೊದಲ ಬಾರಿಗೆ ಕೇನ್ ವಿಲಿಯಮ್ಸನ್ ನೇತೃತ್ವದಲ್ಲಿ ನ್ಯೂಜಿಲೆಂಡ್ T-20 ವಿಶ್ವಕಪ್ ಫೈನಲ್ ಹಂತವನ್ನು ತಲುಪಿದೆ. 2019ರಲ್ಲಿ ಏಕದಿನ ವಿಶ್ವಕಪ್’ಫೈನಲ್ ತಲುಪಿದ್ದ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ರೋಚಕ ಸೋಲು ಕಂಡಿತ್ತು. ಆದರೆ ಪ್ರಸಕ್ತ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿರುವ ಕಿವೀಸ್, ಆಂಗ್ಲನ್ನರನ್ನು ಮನೆಗೆ ಕಳುಹಿಸಿದೆ. ಈ ನಡುವೆ ಭಾರತವನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಕಿರೀಟವನ್ನೂ ನ್ಯೂಜಿಲೆಂಡ್ ತನ್ನದಾಗಿಸಿಕೊಡಿತ್ತು.

ಮತ್ತೊಂದೆಡೆ, ಹ್ಯಾಟ್ರಿಕ್  ಸಾಧನೆಯೊಂದಿಗೆ ಒಟ್ಟು 5 ಬಾರಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್’ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೆ T-20 ವಿಶ್ವಕಪ್ ಪ್ರಶಸ್ತಿಯು ಇನ್ನೂ ಕನಸಾಗಿಯೇ ದೂರ ಉಳಿದಿದೆ. 2010ರಲ್ಲಿ T-20 ವಿಶ್ವಕಪ್ ಫೈನಲ್ ಪ್ರವೇಶಿಸಿತಾದರೂ, ಇಂಗ್ಲೆಂಡ್ ವಿರುದ್ಧ ಸೋಲು ಕಾಣುವಂತಾಗಿತ್ತು. ಇದೀಗ ಎರಡನೇ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.

ಟಿ-20 ವಿಶ್ವಕಪ್’ನಲ್ಲಿ ಉಭಯ ತಂಡಗಳು ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. 2016ರಲ್ಲಿ ನಡೆದ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ವಿಜಯಿಯಾಗಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ 9 ಪಂದ್ಯ ಹಾಗೂ ನ್ಯೂಜಿಲೆಂಡ್ 5 ಪಂದ್ಯಗಳಲ್ಲಿ ಗೆದ್ದಿವೆ.

Join Whatsapp