►ಶೀಘ್ರವೇ ಶನಿವಾರಸಂತೆಯಲ್ಲಿ ಬೃಹತ್ ಸೌಹಾರ್ದ ಸಮಾವೇಶ
ಶನಿವಾರಸಂತೆ; ಪ್ರತಿಭಟನಕಾರರು ಬಾಬಾ ಸಾಹೇಬ್ ಅಂಬೇಡ್ಕರ್ ಜಿಂದಾಬಾದ್ ಎಂದು ಕೂಗಿದ್ದ ಘೋಷಣೆಯನ್ನು ಸಂಘಪರಿವಾರದ ಮುಖಂಡರು “ಪಾಕಿಸ್ತಾನ ಜಿಂದಾಬಾದ್” ಎಂದು ತಿರುಚಿ ಶನಿವಾರಸಂತೆ ಬಂದ್ ಗೆ ಕರೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೊಡಗು ಜಿಲ್ಲೆಯ ಪ್ರಗತಿಪರರು ಮತ್ತು ಪ್ರಜ್ಞಾವಂತ ನಾಗರಿಕರು, ಸೋಮವಾರದ ಬಂದ್ ಅನ್ನು ವಿಫಲಗೊಳಿಸುವಂತೆ ಕರೆ ನೀಡಿದ್ದಾರೆ.
ಇತ್ತೀಚೆಗೆ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಮ್ ಕುಟುಂಬದ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಗೊಳಗಾದ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು ಅವರನ್ನು ಬಂಧಿಸಿದ್ದರು. ಮಾತ್ರವಲ್ಲ ಅಮಾಯಕ ಮುಸ್ಲಿಮರನ್ನು ನಿರಂತರವಾಗಿ ಬೇಟೆಯಾಡಲು ಪೊಲೀಸರು ಆರಂಭಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಮುಸ್ಲಿಮ್ ಮಹಿಳೆಯರು ಶನಿವಾರಸಂತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಮಹಿಳೆಯರು ಡಾ.ಬಿ.ಆರ್. ಅಂಬೇಡ್ಕರ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಇದನ್ನು ಸಂಘಪರಿವಾರದ ಕಾರ್ಯಕರ್ತರು ತಿರುಚಿ ಮುಸ್ಲಿಮ್ ಮಹಿಳೆಯರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಸೋಮವಾರ ಶನಿವಾರಸಂತೆ ಬಂದ್ ಗೆ ಕರೆ ನೀಡಿದ್ದಾರೆ. ಈಗಾಗಲೇ ವಿಡಿಯೋ ತಿರುಚಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೋಮವಾರದ ಬಂದ್ ಕರೆ ನೀಡಿರುವ ಸಂಘಪರಿವಾರದ ಕ್ರಮವನ್ನು ಖಂಡಿಸಿ ಜಿಲ್ಲೆಯ ಪ್ರಗತಿಪರರು, ದಲಿತರು, ಅಲ್ಪಸಂಖ್ಯಾತರು ಒಟ್ಟಾಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಗತಿಪರ ಜನಾಂದೋಲನದ ಕೊಡಗು ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್, ಮುಸ್ಲಿಂ ದ್ವೇಷ ಹರಡುವ ಪ್ರಯತ್ನ ಇದಾಗಿದ್ದು, ಯಾವುದೇ ಸಕಾರಣಗಳಿಲ್ಲದೆ, ವಸ್ತುಸ್ಥಿತಿಯನ್ನು ತಿರುಚುತ್ತಾ ಬಂದ್ ಗೆ ಕರೆ ನೀಡಲಾಗಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕೃತ್ಯಕ್ಕೆ ಕೈಹಾಕಲಾಗಿದೆ. ಅಂಬೇಡ್ಕರ್ ಜಿಂದಾಬಾದ್ ಹೇಳಿದ್ದು ಮನುವಾದಿಗಳಿಗೆ ರುಚಿಸುತ್ತಿಲ್ಲ. ಆದ್ದರಿಂದ ಅದನ್ನು ಪಾಕಿಸ್ತಾನ ಜಿಂದಾಬಾದ್ ಹೇಳಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.
ಈ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಪಮಾನಿಸಲಾಗಿದೆ. ಸಂಘಪರಿವಾರಕ್ಕೆ ಅಂಬೇಡ್ಕರ್ ಮೇಲೆ ಗೌರವವಿಲ್ಲ ಎಂಬುದು ನಮಗೂ ಗೊತ್ತಿದೆ. ಅಂಬೇಡ್ಕರ್ ಅವರ ಬಗ್ಗೆ ನಿಮಗಿರುವ ಅಸಹನೆಯನ್ನು ಈ ರೀತಿ ನೀವು ವ್ಯಕ್ತಪಡಿಸುತ್ತಿದ್ದೀರಿ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಸಂಘಪರಿವಾರದವರು ದಬ್ಬಾಳಿಕೆ, ಪಾಳೇಗಾರಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪಾಳೇಗಾರಿಕೆ ಪ್ರದರ್ಶನವನ್ನು ಪ್ರಜ್ಞಾವಂತ ನಾಗರಿಕರು ಸಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಹೋರಾಟಕ್ಕೆ ಪ್ರತಿಯಾಗಿ ದೊಡ್ಡ ಮಟ್ಟದ ಸೌಹಾರ್ದ ಸಮಾವೇಶವನ್ನು ಹಮ್ಮಿಕೊಂಡು ನಿಮ್ಮ ಹುನ್ನಾರವನ್ನು ಬಯಲಿಗೆಳೆಯುತ್ತೇವೆ ಎಂದು ಅವರು ಎಚ್ಚರಿಸಿದರು.
ಶತ-ಶತಮಾನದಿಂದ ಹಿಂದೂ ಮುಸ್ಲಿಮರು ಇಲ್ಲಿ ಒಗ್ಗಟ್ಟಾಗಿ ಜೀವಿಸುತ್ತಿದ್ದಾರೆ. ಶನಿವಾರಸಂತೆಯ ಪ್ರಜ್ಞಾವಂತ ನಾಗರಿಕರು ಸೌಹಾರ್ದತೆ ಬಯಸುತ್ತಾರೆ. ಈ ಹಿಂದೆ ಇಲ್ಲಿ ‘ಬನ್ನಿ’ ಮರದ ರೆಂಬೆಯನ್ನು ಯಾರೋ ಕಿಡಿಗೇಡಿಗಳು ಕತ್ತರಿಸಿದಾಗ ನಾಡಿನ ಎಲ್ಲಾ ನಾಗರಿಕರು ಸೌಹಾರ್ದತೆಯಿಂದ ಅದನ್ನು ಬಗೆಹರಿಸಿದ್ದರು. ಈಗಲೂ ಇಲ್ಲಿನ ಪ್ರಜ್ಞಾವಂತರು ಸಂಘಪರಿವಾರದ ಹುನ್ನಾರವನ್ನು ವಿಫಲಗೊಳಿಸಲಿದ್ದಾರೆ. ಸೋಮವಾರದ ಬಂದ್ ಅನ್ನು ಎಲ್ಲರೂ ವಿಫಲಗೊಳಿಸಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡ ನಿರ್ವಾಣಪ್ಪ ಮಾತನಾಡಿ, ಸಂಘಪರಿವಾರದ ಕುತಂತ್ರಿಗಳು ಒಂದು ಕೋಮಿನ ಜನರನ್ನು ಪ್ರಚೋದಿಸುತ್ತಾ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ಸಮುದಾಯವನ್ನು ಅವಹೇಳನ ಮಾಡುವುದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಗೆ ಮಸಿ ಬಳಿಯುವುದನ್ನು ಸಹಿಸುವುದಿಲ್ಲ. ತಿಳುವಳಿಕೆ ಇಲ್ಲದ ಕೆಲವು ಯುವಕರನ್ನು ಮುಂದಿಟ್ಟುಕೊಂಡು ಇಡೀ ದಲಿತ ಸಮುದಾಯವನ್ನು ಗೆಲ್ಲಬಹುದು ಎಂಬುದು ನಿಮ್ಮ ಕನಸು. ನಿಮ್ಮ ಹುನ್ನಾರಗಳಿಗೆ ದಲಿತರು ಬಲಿಯಾಗುವುದಿಲ್ಲ ಎಂದರು.
ನಿಮ್ಮ ಕುತಂತ್ರಗಳನ್ನು ಮೆಟ್ಟಿ ನಿಲ್ಲುತ್ತೇವೆ, ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾಗಿದ್ದೇವೆ. ಹೆಣ್ಣು ಮಕ್ಕಳು ತಮ್ಮ ಹಕ್ಕಿಗಾಗಿ ಅಂಬೇಡ್ಕರ್ ಅವರ ಪರ ಘೋಷಣೆ ಕೂಗಿರುವುದು ದೊಡ್ಡ ವಿಷಯ. ಕೋಮು ಸೌಹಾರ್ದವನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಸೋಮವಾರದ ಬಂದ್ ವಿಫಲಗೊಳಿಸಲು ಎಲ್ಲಾ ಬುದ್ಧಿಜೀವಿಗಳು, ಹೋರಾಟಗಾರರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಇದು ಪ್ರಚೋದನಾಕಾರಿ ಬಂದ್, ಅನವಶ್ಯಕ, ಜನವಿರೋಧಿ ಬಂದ್ ಆಗಿದೆ. ಕೋಮುಗಲಭೆ ಸೃಷ್ಟಿಸಲು ಬಂದ್ ಗೆ ಕರೆ ನೀಡಲಾಗಿದೆ. ಪೊಲೀಸರು ಬಂದ್ ಗೆ ಅವಕಾಶ ನೀಡಬಾರದು. ಬಲವಂತವಾಗಿ ಬಂದ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು. ವ್ಯಾಪಾರಸ್ಥರು ಕೂಡ ಯಾವುದೇ ಗೊಡ್ಡು ಬೆದರಿಕೆಗೆ ಹೆದರಬಾರದು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಂಡು ಸಂಘಪರಿವಾರದ ಷಡ್ಯಂತ್ರವನ್ನು ಬೆತ್ತಲುಗೊಳಿಸಲಾಗುವುದು ಎಂದು ಅವರು ಹೇಳಿದರು.
ಇಡೀ ಮುಸ್ಲಿಮ್ ಸಮುದಾಯವನ್ನು ತುಳಿಯುತ್ತೇವೆ ಎಂಬುದು ನಿಮ್ಮ ಕನಸು. ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಾಂತವನ್ನು ಮುಸ್ಲಿಮರು ಸೇರಿ ಎಲ್ಲಾ ತಳ ಸಮುದಾಯದವರು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ದಲಿತ ಮುಖಂಡರಾದ ಎಚ್.ಬಿ.ಜಯಮ್ಮ ಮಾತನಾಡಿ. ದಲಿತರು ಅಲ್ಪಸಂಖ್ಯಾತರ ಬಗ್ಗೆ ಸಂಘಪರಿವಾರಕ್ಕೆ ಹಿಂದಿನಿಂದಲೂ ಅಸಹನೆ ಇದ್ದೇ ಇದೆ. ದಲಿತ ಯುವಕರನ್ನು ಬಳಸಿ ಗಲಭೆ ಸೃಷ್ಟಿಗೆ ಯತ್ನ ನಡೆಸಲಾಗಿದೆ. ಇದನ್ನು ಎಲ್ಲರೂ ಒಂದಾಗಿ ವಿಫಲಗೊಳಿಸುತ್ತೇವೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ, ಪೊಲೀಸ್ ಠಾಣೆಯ ಮುಂದೆ ಅಲ್ಪಸಂಖ್ಯಾತ ಮಹಿಳೆಯರು ಇಷ್ಟೊಂದು ಪ್ರಮಾಣದಲ್ಲಿ ಜಮಾಯಿಸಿ ಇದೇ ಮೊದಲ ಬಾರಿಗೆ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಿದ್ದಾರೆ. ಅಂಬೇಡ್ಕರ್ ಅವರಿಗೆ ಜೈಕಾರ ಹಾಕಿದ್ದನ್ನು ಸ್ವತಃ ನಾನೇ ಕೇಳಿದ್ದೇನೆ. ಆದರೆ ಅದನ್ನು ಸಂಘಪರಿವಾರದವರು ತಿರುಚಿದ್ದಾರೆ. ಇದರ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಸತ್ಯಸಂಗತಿಯನ್ನು ಪೊಲೀಸರು ಸಮಾಜಕ್ಕೆ ತಿಳಿಸಿ, ನಾಡಿನ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಸುಳ್ಳು ಹೇಳುವುದೇ ಬಿಜೆಪಿಯ ಬಂಡವಾಳ. ಅಂಬೇಡ್ಕರ್ ಅವರ ಸಂವಿಧಾನದಡಿ ಎಲ್ಲರೂ ಒಂದಾಗಿ ನಾಳೆಯ ಬಂದ್ ಅನ್ನು ವಿಫಲಗೊಳಿಸುತ್ತೇವೆ. ಸಂಘಪರಿವಾರಕ್ಕೆ ಹೆದರುವ ಯಾವ ಅಲ್ಪಸಂಖ್ಯಾತರು ಕೊಡಗು ಜಿಲ್ಲೆಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಆದಿಲ್ ಪಾಷ, ಸ್ಥಳೀಯ ಮುಖಂಡರಾದ ಅಕ್ಮಲ್ ಪಾಷ, ಶಾಹಿದ್ ಖಾನ್, ಸಯ್ಯದ್, ಅಬ್ಬಾಸ್ ಮುಂತಾದವರು ಕೂಡ ಬಂದ್ ಕರೆಯನ್ನು ವಿಫಲಗೊಳಿಸುವಂತೆ ಮನವಿ ಮಾಡಿದರು.