UAEಯ ವಿವಿಧೆಡೆ ಲಘು ಭೂಕಂಪದ ಅನುಭವ: ಕಟ್ಟಡಗಳಿಂದ ಹೊರಗೆ ಓಡಿದ ನಿವಾಸಿಗಳು

Prasthutha|

ದುಬೈ: ದಕ್ಷಿಣ ಇರಾನಿನಲ್ಲಿ ಸಂಭವಿಸಿದ ಲಘು ಭೂಕಂಪನದಿಂದಾಗಿ  UAEಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಕಟ್ಟಡಗಳಿಂದ ಹೊರಗಡೆ ಓಡಿ ಬಂದಿದ್ದಾರೆ.

- Advertisement -

ದುಬೈ ಶಾರ್ಜಾ ಹಾಗೂ ರಾಸಲ್ ಕೈಮಾದ ವಿವಿಧ ಪ್ರದೇಶಗಳಲ್ಲಿ ಎರಡರಿಂದ ಮೂರು ನಿಮಿಷಗಳವರೆಗೆ ಸಣ್ಣ ಶಬ್ಧದೊಂದಿಗೆ ಭೂಮಿ ನಡುಗಿದ ಅನುಭವವಾದ ಕಾರಣ ಜನರು ಭಯಭೀತರಾಗಿ ಮನೆ, ಕಟ್ಟಡಗಳಿಂದ ಹೊರಗಡೆ ಓಡಿದ್ದಾರೆ ಎಂದು ಕಲೀಜ್ ಟೈಮ್ಸ್ ವರದಿ ಮಾಡಿದೆ.

ಸಂಜೆ 4 ಗಂಟೆಯ ವೇಳೆ ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಭೂಕಂಪ ದಕ್ಷಿಣ ಇರಾನ್’ನಲ್ಲಿ ಸಂಭವಿಸಿದ್ದು, ಇದರ ಪರಿಣಾಮದಿಂದಾಗಿ ದುಬೈನ ಜುಮೇರಾ ಲೇಕ್ ಟವರ್ಸ್, ನಹ್ದಾ, ದೇರಾ, ಬರ್ಶಾ, DIP ಹಾಗೂ ಡಿಸ್ಕವರಿ ಗಾರ್ಡನ್’ಗಳಲ್ಲಿ ಹಾಗೂ ಶಾರ್ಜಾದ ಅಲ್ ನಹ್ದಾ, ಕಾರ್ನಿಶ್ ಹಾಗೂ ರಾಸಲ್ ಕೈಮಾದ ಕೆಲ ಪ್ರದೇಶಗಳಲ್ಲಿ  ಭೂಮಿ ಕಂಪಿಸಿದ ಅನುಭವವಾಗಿದೆ. ಮುನ್ನಚ್ಚೆರಿಕೆಯ ಕ್ರಮವಾಗಿ ಈ ಪ್ರದೇಶಗಳಲ್ಲಿನ ಎಲ್ಲಾ ಕಟ್ಟಡಗಳಲ್ಲಿದ್ದವರನ್ನು ತೆರವುಗೊಳಿಸಲಾಗಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ UAEಯ ರಾಷ್ಟ್ರೀಯ ಹವಾಮಾನ ಕೇಂದ್ರ, ದಕ್ಷಿಣ ಇರಾನ್’ನಲ್ಲಿ ಸಂಭವಿಸಿದ ಲಘು ಭೂಕಂಪನದ ಪರಿಣಾಮ UAEಯ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ದೃಢೀಕರಿಸಿದೆ. ಆದರೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ಜನರು ಭಯಭೀತರಾಗಬೇಕಾಗಿಲ್ಲ ಎಂದು ಹೇಳಿದೆ.

ಭೂಕಂಪನದ ಅನುಭವ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಫೋಟೋಸ್-ವೀಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದೆ.

Join Whatsapp