ವಾಷಿಂಗ್ಟನ್: ಟ್ಯಾಕ್ಸಿ ಸೇವಾ ಸಂಸ್ಥೆಯಾದ ಉಬರ್ ಟೆಕ್ನಾಲಜೀಸ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ದೂರು ನೀಡಿದೆ.
ಉಬರ್ ಅಂಗವಿಕಲರು ಪ್ರಯಾಣಿಸುವಾಗ ಕಿರುಕುಳ ನೀಡುತ್ತಿದೆ ಎಂದು ಟ್ಯಾಕ್ಸಿಯ ‘ವೆಯಿಟ್ ಟೈಮ್ ಫೀಸ್’ ನೀತಿಯನ್ನು ಪ್ರಶ್ನಿಸಿ ದೂರು ನೀಡಲಾಗಿದೆ.
ನ್ಯಾಯಾಂಗ ಇಲಾಖೆಯು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ನ್ಯಾಯಾಲಯದಲ್ಲಿ ಉಬರ್ ವಿರುದ್ಧ ಮೊಕದ್ದಮೆ ಹೂಡಿದೆ. ದೈಹಿಕವಾಗಿ ಅಶಕ್ತರನ್ನು ರಕ್ಷಿಸುವ ಫೆಡರಲ್ ಕಾನೂನನ್ನು ಅನುಸರಿಸಲು ಕಂಪನಿಗೆ ಆದೇಶಿಸುವಂತೆ ನ್ಯಾಯಾಂಗ ಇಲಾಖೆಯು ಅಮೆರಿಕದ ಫೆಡರಲ್ ನ್ಯಾಯಾಲಯವನ್ನು ಕೇಳಿಕೊಂಡಿದೆ.
2016 ರಲ್ಲಿ ಉಬರ್ ‘ವೆಯಿಟ್ ಟೈಮ್ ಫೀಸ್’ ವಿಧಿಸುವ ನೀತಿಯನ್ನು ಪರಿಚಯಿಸಿತ್ತು. ದೇಶದ ಕೆಲವು ನಗರಗಳಲ್ಲಿ ಮಾತ್ರ ಆರಂಭವಾದ ಈ ನೀತಿಯನ್ನು ನಂತರ ಇಡೀ ಅಮೆರಿಕಕ್ಕೂ ವಿಸ್ತರಿಸಲಾಗಿತ್ತು.
ಈ ನೀತಿಯು ದೈಹಿಕ ಅಶಕ್ತರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದು ನ್ಯಾಯಾಂಗ ಇಲಾಖೆಯ ವಾದ.
ದೃಷ್ಟಿಹೀನರು ಮತ್ತು ಗಾಲಿಕುರ್ಚಿ ಬಳಕೆದಾರರಿಗೆ ವಾಹನದ ಕಡೆಗೆ ನಡೆಯಲು ಸಮಯ ತೆಗೆದುಕೊಳ್ಳುತ್ತದೆ. ಈ ವೇಳೆ ವೆಯಿಟಿಂಗ್ ಚಾರ್ಜ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.