ತಲೆಮರೆಸಿಕೊಂಡಿರುವ ವ್ಯಕ್ತಿಗಳು, ಘೋಷಿತ ಅಪರಾಧಿಗಳು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ: ಸುಪ್ರೀಂಕೋರ್ಟ್

Prasthutha|

ನವದೆಹಲಿ: ತಲೆತಪ್ಪಿಸಿಕೊಂಡಿರುವ ಅಥವಾ ಘೋಷಿತ ಅಪರಾಧಿ ಎಂದು ಪರಿಗಣಿಸಲ್ಪಟ್ಟಿರುವ ವ್ಯಕ್ತಿಯು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

- Advertisement -


ಭಾರತೀಯ ದಂಡ ಸಂಹಿತೆಯಡಿ ಸೆಕ್ಷನ್ 406 (ವಿಶ್ವಾಸದ್ರೋಹ) ಮತ್ತು 420 (ವಂಚನೆ) ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ಜಾಮೀನು ನಿಡಿದ್ದ ಪಟ್ನಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ನ್ಯಾ.ಎಂ ಆರ್ ಶಾ ಮತ್ತು ನ್ಯಾ. ಎ ಎಸ್ ಬೋಪಣ್ಣ ಅವರಿದ್ದ ಪೀಠವು 2014ರಲ್ಲಿ ಮಧ್ಯಪ್ರದೇಶ ವರ್ಸಸ್ ಪ್ರದೀಪ್ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಅವಲಂಬಿಸಿತು.


ನ್ಯಾಯಾಲಯವು ಆದೇಶದ ವೇಳೆ, “ಮಧ್ಯಪ್ರದೇಶ ವರ್ಸಸ್ ಪ್ರದೀಪ್ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಯಾವುದೇ ವ್ಯಕ್ತಿಯನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಡಿ ಸೆಕ್ಷನ್ 82ರ ಅಡಿ ತಲೆತಪ್ಪಿಸಿಕೊಂಡಿರುವವರು/ ಘೋಷಿತ ಅಪರಾಧಿ ಎಂದು ಪರಿಗಣಿಸಿದ್ದಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದು ಹೇಳಿದೆ” ಎನ್ನುವುದನ್ನು ದಾಖಲಿಸಿತು.

- Advertisement -


ಪ್ರಸ್ತುತ ಪ್ರಕರಣದಲ್ಲಿ ಆರೋಪಿಯು ವಾಣಿಜ್ಯ ವ್ಯವಹಾರವೊಂದರ ಸಂಬಂಧ ನೀಡಿದ್ದ ಚೆಕ್ ಬ್ಯಾಂಕ್ನಲ್ಲಿ ತಿರಸ್ಕೃತವಾಗಿತ್ತು. ಐಪಿಸಿ ಸೆಕ್ಷನ್ 406, 407, 468, 506 ಅಡಿ ಆರೋಪಿ ಅರ್ಜಿದಾರರ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಾಗಿತ್ತು. ಪ್ರಕರಣದ ಸಂಬಂಧ ಚಪ್ರಾದ ಸರನ್ ನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಬಂಧನ ವಾರೆಂಟ್ ನೀಡಿದ್ದರು.


ತದನಂತರ ಆರೋಪಿಯು ವಾರೆಂಟ್ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು. ಸಿಆರ್ ಪಿಸಿ ಸೆಕ್ಷನ್ 82ರ ಅಡಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಆರೋಪಿಯ ಹಾಜರಿಗೆ ಆದೇಶಿಸಿದ್ದರು. ಈ ಬಳಿಕ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪವು ವಾಣಿಜ್ಯ ವ್ಯವಹಾರದ ಹಿನ್ನೆಲೆಯಲ್ಲಿ ಮೂಡಿದೆ ಎನ್ನುವ ಕಾರಣವನ್ನು ನೀಡಿ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಇತ್ತ ದೂರುದಾರರು ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಆರೋಪಿಯು ತನಿಖಾ ಸಂಸ್ಥೆಗೆ ಸಹಕರಿಸದೆ ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 82ರ ಅಡಿ ನ್ಯಾಯಾಲಯವು ಆರೋಪಿ ತಲೆತಪ್ಪಿಸಿಕೊಂಡಿರುವ ಬಗ್ಗೆ ಘೋಷಿಸಿದೆ. ಹೀಗಿರುವಾಗ ಅವರಿಗೆ ಜಾಮೀನು ನೀಡಲು ಬರುವುದಿಲ್ಲ ಎಂದು ದೂರುದಾರರ ಪರ ವಕೀಲರು ವಾದಿಸಿದ್ದರು.


ಅಂತಿಮವಾಗಿ ಸುಪ್ರೀಂ ಕೋರ್ಟ್, ನ್ಯಾಯಾಲಯವು ಪರಿಗಣಿಸಬೇಕಿರುವುದು ದೋಷಾರೋಪಣೆ ಮತ್ತು ಆರೋಪಗಳನ್ನು ಪರಿಗಣಿಸಬೇಕೆ ಹೊರತು ವಾಣಿಜ್ಯ ವ್ಯವಹಾರದಿಂದಾಗಿ ಈ ಆರೋಪಗಳು ಮೂಡಿವೆ ಎನ್ನುವುದನ್ನಲ್ಲ ಎಂದು ಅಭಿಪ್ರಾಯಪಟ್ಟಿತು. ಹೈಕೋರ್ಟ್ ನೀಡಿದ್ದ ಅದೇಶವನ್ನು ಬದಿಗೆ ಸರಿಸಿತು.



Join Whatsapp