ಬೆಂಗಳೂರು : ರಾಜ್ಯದಲ್ಲಿ ಸಂಘಪರಿವಾರದ ದುಷ್ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಹುದ್ದೆಯ ಗೌರವ ಮರೆತು ಕಾನೂನು ಕೈಗೆತ್ತಿಕೊಳ್ಳುವವರಿಗೆ ಬೆಂಬಲ ನೀಡುತ್ತಿದ್ದಾರೆ. ಇದರ ವಿರುದ್ಧ ಪಾಪ್ಯುಲರ್ ಫ್ರಂಟ್ ಬೀದಿಗಿಳಿದು ಹೋರಾಟ ನಡೆಸಲಿದೆ. ಅಗತ್ಯವಿದ್ದರೆ ಇಂತಹ ಶಕ್ತಿಗಳಿಗೆ ಪ್ರತಿರೋಧ ಒಡ್ಡಲು ಕೂಡ ಸಿದ್ಧವಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿ, ಗೂಂಡಾಪ್ರವೃತ್ತಿ, ಸಮಾಜ ವಿರೋಧಿ ಹೇಳಿಕೆ ನೀಡುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಿವೆ. ಆಯುಧ ಪೂಜೆಯ ಹೆಸರಿನಲ್ಲಿ ತಲವಾರು ಪ್ರದರ್ಶನ, ತ್ರಿಶೂಲ ದೀಕ್ಷೆ ನಡೆಸಲಾಗಿದೆ. ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಪೊಲೀಸರು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸಿದ್ದಾರೆ. ಒಂದು ಕೋಮಿನವರು ನಡೆಸಿದ ಅನೈತಿಕ ಪೊಲೀಸ್ ಗಿರಿಯಲ್ಲಿ ಪೊಲೀಸರು ಕ್ರಮಕೈಗೊಂಡರೆ ಮತ್ತೊಂದು ಕೋಮಿನವರು ನಡೆಸಿದ ಪ್ರಕರಣದಲ್ಲಿ ಮೌನವಹಿಸಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ. ಇದು ಸ್ವಾಗತಾರ್ಹ. ಮುಖ್ಯಮಂತ್ರಿ ಕೂಡ ತಕ್ಷಣ ಹೇಳಿಕೆ ನೀಡಿ, ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದರು. ಆದರೆ ಮಂಗಳೂರಿನಲ್ಲಿ ಅದೇ ಮಾದರಿಯ ಘಟನೆ ನಡೆದಾಗ ಮುಖ್ಯಮಂತ್ರಿ ನೈತಿಕ ಪೊಲೀಸ್ ಗಿರಿ ನಡೆಸುವವರಿಗೆ ಬೆಂಬಲವಾಗಿ ಮಾತನಾಡಿದ್ದಾರೆ. ಇದು ಏನನ್ನು ತೋರಿಸುತ್ತದೆ ಎಂದು ಅವರು ಪ್ರಶ್ನಿಸಿದರು.
ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಇಂತಹ ಕೀಳುಮಟ್ಟಕ್ಕೆ ಇಳಿದಿರಲಿಲ್ಲ. ಆದರೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್. ನವರನ್ನು ತೃಪ್ತಿಪಡಿಸಲು ಮತ್ತು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯದ ಶೇಕಡಾ 95ರಷ್ಟು ಜನರು ಶಾಂತಿಪ್ರಿಯರು, ಇದರ ವಿರುದ್ಧ ಜನರು ಜನಾಂದೋಲನ ನಡೆಸಿ ಬೀದಿಗಿಳಿದರೆ ಮುಖ್ಯಮಂತ್ರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂಬುದನ್ನು ಅರಿಯಲಿ ಎಂದು ಎಚ್ಚರಿಸಿದರು.
ಬೊಮ್ಮಾಯಿ ಯಾರಿಂದಲೋ ಬೆನ್ನು ತಟ್ಟಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ತನ್ನ ಸಿಎಂ ಸ್ಥಾನ ಮರೆತು ಬಜರಂಗ ದಳದ ರಾಜ್ಯ ಸಂಚಾಲಕನಂತೆ ಹೇಳಿಕೆ ನೀಡಿದ್ದಾರೆ. ಮಂಗಳೂರು ಭೇಟಿ ಸಂದರ್ಭದಲ್ಲಿ ನಿರ್ಭೀತಿ ವಾತಾವರಣ ನಿರ್ಮಿಸಬೇಕಾದ ಅವರು ಗೂಂಡಾಗಿರಿಗೆ ಬೆಂಬಲ ನೀಡುವಂತೆ ಆ್ಯಕ್ಷನ್ ಗೆ ರಿಯಾಕ್ಷನ್ ಎನ್ನುವ ರೀತಿ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಗೂಂಡಾಗಿರಿ ಮಾಡುವವರಿಗೆ ಮತ್ತಷ್ಟು ಸ್ಫೂರ್ತಿಯಾಗಿದೆ. ಅವರ ಹೇಳಿಕೆ ನಂತರ ಗೂಂಡಾಗಿರಿ ಹೆಚ್ಚಾಗಿದೆ ಎಂದು ಅಶ್ರಫ್ ಆರೋಪಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸಿರುವುದು ಕಾನೂನು ಬಾಹಿರವಾಗಿದೆ. ಅಲ್ಪಸಂಖ್ಯಾತರಲ್ಲಿ ನಿರ್ದಿಷ್ಟವಾಗಿ ಮುಸ್ಲಿಮ್ ಸಮುದಾಯದಲ್ಲಿ ಭೀತಿ ಸೃಷ್ಟಿಸುವ ಇಂತಹ ದುರುದ್ದೇಶಪೂರಿತ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿ ಘಟನೆಗಳನ್ನು ಮುಚ್ಚಿಹಾಕಬಾರದು. ಈ ಕಾರ್ಯಕ್ರಮದ ಸಂಘಟಕರು ಮತ್ತು ಖಡ್ಗ ಝಳಪಿಸಿದ ಕಾರ್ಯಕರ್ತರ ವಿರುದ್ಧ ನಿಷ್ಪಕ್ಷಪಾತವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ರಾಜ್ಯದ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು ವಲಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್, ರಾಜ್ಯ ಮುಖಂಡ ಅಬ್ದುಲ್ ರಝಾಕ್ ಕೆಮ್ಮಾರ ಉಪಸ್ಥಿತರಿದ್ದರು.