ಕೊಲ್ಲಂ: ಇಡೀ ದೇಶದ ಗಮನವನ್ನೇ ಸೆಳೆದಿದ್ದ ಕೇರಳದ ಉತ್ರಾ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ವಿಕಲಚೇತನೆ ಪತ್ನಿ, ಉತ್ರಾ [25] ಮಲಗಿದ್ದ ವೇಳೆ ನಾಗರಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ್ದ ಹೀನ ಪ್ರಕರಣದಲ್ಲಿ ಪತಿ ಸೂರಜ್ ನನ್ನು ಅಪರಾಧಿ ಎಂದು ಘೋಷಿಸಿರುವ ಕೇರಳ ನ್ಯಾಯಾಲಯವು ಬುಧವಾರ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿದೆ.
ಕೊಲೆ ಮತ್ತು ಕೊಲೆ ಯತ್ನ ಆರೋಪಗಳಿಗೆ ಪ್ರತ್ಯೇಕವಾಗಿ ಜೀವಾವಧಿ ಶಿಕ್ಷೆ ವಿಧಿಸಿರುವ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮನೋಜ್ ಎಂ, ವಿಷದ ಮುಖೇನ ಹಾನಿ ಮಾಡಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯ ನಾಶ ಮಾಡಿದ್ದಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 302 (ಕೊಲೆ), 307 (ಕೊಲೆ ಯತ್ನ), 328 (ವಿಷದ ಮೂಲ ಗಾಯ ಉಂಟು ಮಾಡುವುದು), 201ರ (ಸಾಕ್ಷ್ಯ ನಾಶ) ಅಡಿ ಸೂರಜ್ ಮನ್ನು ಅಪರಾಧಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಸೋಮವಾರ ತೀರ್ಪು ಪ್ರಕಟಿಸಿತ್ತು.
ಪ್ರಾಸಿಕ್ಯೂಷನ್ ಪರ ವಕೀಲ ಜಿ ಮೋಹನ್ ರಾಜ್ ಅವರು ಅಪರಾಧಿ ಸೂರಜ್ ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು.
ಶಿಕ್ಷೆ ಪ್ರಕಟವಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ರಾಜ್ ಅವರು “ಸೂರಜ್ ಯುವಕನಾಗಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದರಿಂದ ಮರಣದಂಡನೆ ವಿಧಿಸಲು ನ್ಯಾಯಾಲಯ ನಿರಾಕರಿಸಿದೆ” ಎಂದು ಹೇಳಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಹಾವು ಮಾರಾಟಗಾರ 10,000 ರೂ.ಗಳಿಗೆ ಎರಡು ಹಾವುಗಳನ್ನು ಸೂರಜ್ ಗೆ ಮಾರಾಟ ಮಾಡಿದ್ದ ಅಂಶ ಬೆಳಕಿಗೆ ಬಂದಿತ್ತು. ಬಳಿಕ ಹಾವು ಮಾರಾಟ ಮಾಡಿದ್ದಾತ ಮತ್ತು ಸೂರಜ್ ನನ್ನು ಪೊಲೀಸರು ಬಂಧಿಸಿದ್ದರು. ಹಾವು ಮಾರಾಟಗಾರನೇ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯ ನುಡಿದಿದ್ದ. ಇದಲ್ಲದೆ, ಕೇರಳ ಪೊಲೀಸರು ವಿವಿಧ ಪರಿಣತರಿಂದ ಅಭಿಪ್ರಾಯ ಪಡೆದು, ಘಟನೆಯನ್ನು ಮರುಸೃಷ್ಟಿಸಿ, ಗೊಂಬೆಯೊಂದಕ್ಕೆ ಹಾವನ್ನು ಕಚ್ಚಿಸುವ ಮೂಲಕ ಹಾವು ಸಹಜವಾಗಿ ಕಚ್ಚಿದಾಗ ಆಗುವ ಗಾಯಕ್ಕೂ, ಅದನ್ನು ಉದ್ದೇಶಪೂರ್ವಕವಾಗಿ ಕಚ್ಚಿಸಿದಾಗ ಉಂಟಾಗುವ ಗಾಯಕ್ಕೂ ಇರುವ ವ್ಯತ್ಯಾಸವನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣದಲ್ಲಿ ಸೂರಜ್ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ, ಪಿತೂರಿ ಮತ್ತಿತರ ಆರೋಪಗಳಿಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಉತ್ರಾ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ಅಂತಿಮವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಸೂರಜ್ ಆರ್ಥಿಕ ಲಾಭಕ್ಕಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಸೂರಜ್ ಕುಟುಂಬದ ಮೇಲಿರುವ ಕೌಟುಂಬಿಕ ದೌರ್ಜನ್ಯ ಹಾಗೂ ವಿವಿಧ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿಯಿದೆ.
2020ರ ಮೇ ತಿಂಗಳಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡುವಲ್ಲಿ ಅಪರಾಧಿ ಸೂರಜ್ ಯಶಸ್ವಿಯಾಗಿದ್ದ. 2020ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿ ಸೂರಜ್, ಮಂಡಲದ ಹಾವು ಬಳಸಿ ಪತ್ನಿಯನ್ನು ಕೊಲ್ಲಲು ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಮೊದಲ ಬಾರಿಯ ಕಡಿತದಿಂದ ಅನಾರೋಗ್ಯಗೊಂಡ ಪತ್ನಿಯು ಚೇತರಿಸಿಕೊಳ್ಳುತ್ತಿರುವಾಗಲೇ ಎರಡನೇ ಬಾರಿಯ ಪ್ರಯತ್ನದಲ್ಲಿ ಆಕೆಯನ್ನು ನಾಗರಹಾವನ್ನು ಕಚ್ಚಿಸುವ ಮೂಲಕ ಕೊಲೆ ಮಾಡುವಲ್ಲಿ ಅಪರಾಧಿಯು ಯಶಸ್ವಿಯಾಗಿದ್ದ. ಮೊದಲ ಬಾರಿಯ ವಿಫಲ ಯತ್ನವು ಸೂರಜ್ ವಿರುದ್ಧದ ಆರೋಪ ಬಲಗೊಳ್ಳುವಂತೆ ಮಾಡಿತ್ತು.