ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬ ದಿನವಾದ ಸೆ.17 (ಶುಕ್ರವಾರ) ಅನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ದೇಶಾದ್ಯಂತ ಆಚರಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಕರ್ನಾಟಕದಲ್ಲಿಯೂ ನಾಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಿರುದ್ಯೋಗ ದಿನವನ್ನು ಆಚರಿಸಲಿದ್ದು, ಬೆಳಗ್ಗೆ 11.30ಕ್ಕೆ ನಿರುದ್ಯೋಗದ ವಿರುದ್ಧ ಸಿಟಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಜಾಥಾ ಹಮ್ಮಿಕೊಂಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಬಿಗಡಾಯಿಸುತ್ತಿದ್ದು, ತಕ್ಷಣ ಉದ್ಯೋಗ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ಸೆಪ್ಟೆಂಬರ್ 17 ರಂದು “ರಾಷ್ಟ್ರೀಯ ನಿರುದ್ಯೋಗ ದಿನ” ಆಚರಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ತಿಳಿಸಿದ್ದಾರೆ.
ಯುವ ಸಮೂಹ, ಯುವ ಕಾರ್ಯಕರ್ತರು ಅಂದು ತಮ್ಮ ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಉದ್ಯೋಗ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಬೇಕೆಂದು ಮನವಿ ಮಾಡಿದ್ದಾರೆ.