ಪ್ರತಿಭಟನೆಯ ವರದಿ ಮಾಡುತ್ತಿದ್ದ ಪತ್ರಕರ್ತನ ಮೇಲೆ ಸಂಘಪರಿವಾರದಿಂದ ಹಲ್ಲೆ: ಕಠಿಣ ಕ್ರಮಕ್ಕೆ ಎಸ್ ಡಿಪಿಐ ಆಗ್ರಹ

Prasthutha|

ಮೈಸೂರು: ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿರುವುದನ್ನು ಖಂಡಿಸಿ ಸಂಘಪರಿವಾರ ಸಂಘಟನೆಗಳು ಮೈಸೂರು ಪ್ಯಾಲೇಸ್ ಬಳಿ ನಡೆಸುತ್ತಿದ್ದ ಪ್ರತಿಭಟನೆಯ ವರದಿಗೆ ತೆರಳಿದ್ದ “ ಅಲ್ ಕೌಸರ್ “ ಚಾನಲ್ ನ ವರದಿಗಾರ ಖೈಸರ್ ಎಂಬವರ ಮೇಲೆ ಸಂಘಪರಿವಾರದ ಗೂಂಡಾಗಳು ಮೃಗೀಯ ರೀತಿಯಲ್ಲಿ ವರ್ತಿಸಿ ಪೊಲೀಸರ ಸಮ್ಮುಖದಲ್ಲೇ ಗೂಂಡಾಗಿರಿ ನಡೆಸಿ ಅಮಾನುಷವಾಗಿ ಹಲ್ಲೆ ನಡೆಸಿದ ಕೃತ್ಯವನ್ನು ಎಸ್ ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ಅಮ್ಜದ್ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಂಜನಗೂಡಿನಲ್ಲಿರುವ ದೇವಸ್ಥಾನವನ್ನು ಸರ್ಕಾರದ ಆದೇಶದ ಪ್ರಕಾರವೇ ತೆರವುಗೊಳಿಸಲಾಗಿದೆ. ಈ ಬಗ್ಗೆ ಸಂಘಪರಿವಾರದ ನಾಯಕರಿಗೂ, ಜನಪ್ರತಿನಿಧಿಗಳಿಗೂ ಮಾಹಿತಿ ಇತ್ತು. ಆದರೆ ಮತದಾರರನ್ನು ಭಾವನಾತ್ಮಕವಾಗಿ ವಂಚಿಸಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಿಂದುಗಳ ಭಾವನೆಗೆ ಧಕ್ಕೆ ತಂದು ಇದೀಗ ಬೀಸುವ ದೊಣ್ಣೆಯಿಂದ ತಪ್ಪಿಸುವ ಸಲುವಾಗಿ ಪ್ರತಿಭಟನೆ ಎಂಬ ನಾಟಕ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.
ಸಂಘಪರಿವಾರದ ಗೂಂಡಾಗಳು ದೇವಸ್ಥಾನವನ್ನು ನಾಶ ಗೊಳಿಸಿದ ಘಟನೆಯನ್ನು ದಿಕ್ಕು ತಪ್ಪಿಸುವ ಸಲುವಾಗಿ ಪತ್ರಕರ್ತರಿಗೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ಗೂಂಡಾಗಿರಿ ನಡೆದಿದ್ದರೂ ಸಂಘದ ಗೂಂಡಾಗಳನ್ನು ಚದುರಿಸಲು ಪೊಲೀಸರು ವಿಫಲವಾಗಿರುವುದು ಮತ್ತು ಪೊಲೀಸರ ಲಾಠಿ ಮೌನಕ್ಕೆ ಜಾರಿರುವುದು ಖೇದಕರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಭಾಗಿಯಾಗಿರುವ ಮತ್ತು ಪ್ರತಿಭಟನೆಯ ಆಯೋಜಕರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಎಲ್ಲಾ ಅನಾಹುತಕ್ಕೆ ಪೊಲೀಸ್ ಇಲಾಖೆಯೇ ನೇರ ಕಾರಣವಾಗಲಿದೆ ಎಂದು ಅಮ್ಜದ್ ಎಚ್ಚರಿಸಿದ್ದಾರೆ.



Join Whatsapp