ಮಲಪ್ಪುರಮ್: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐ.ಸಿ.ಎಚ್. ಆರ್) ಸ್ವಾತಂತ್ರ್ಯ ಹೋರಾಟ 1857 – 1947 ಅವಧಿಯ ಪಟ್ಟಿಯಿಂದ ಹುತಾತ್ಮರ ಪಟ್ಟಿಯಿಂದ ಮಾಪಿಳ್ಳ ಅಥವಾ ಮೊಪ್ಲಾ ನಾಯಕರ ಹೆಸರನ್ನು ತೆಗೆದು ಹಾಕಿದ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ವಿದ್ಯಾರ್ಥಿ ಸಂಘಟನೆಯಾದ ಎಸ್.ಐ.ಒ ಕೇರಳ ಘಟಕವು ಡಿಕ್ಷನರಿಯನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲ ಎಲ್ಲಾ 387 ಹುತಾತ್ಮರ ಹೆಸರನ್ನು ಸಂಗ್ರಹಿಸಿ ಇದನ್ನು ಪ್ರಕಟಿಸಿದೆ.
1921 ರ ಮಲಬಾರ್ ದಂಗೆಯನ್ನು ಇತಿಹಾಸಕಾರರು ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧದ ಮೊದಲ ಸಾಮೂಹಿಕ ದಂಗೆ ಎಂದು ಎಸ್.ಐ.ಒ ಕೇರಳ ರಾಜ್ಯಾಧ್ಯಕ್ಷ ಅಮ್ಜದ್ ಅಲಿ ಇ.ಎಮ್ ಬಣ್ಣಿಸಿದ್ದಾರೆ. ಈ ನಿಟ್ಟಿನಲ್ಲಿ ಮಾಪಿಳ್ಳ ದಂಗೆ ಹುತಾತ್ಮರನ್ನು ನೆನೆಪಿಸುವ ಸಲುವಾಗಿ ಡಿಕ್ಷನರಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಎಸ್.ಐ.ಒ ಕೇರಳ ರಾಜ್ಯಾಧ್ಯಕ್ಷ ಅಮ್ಜದ್ ಅಲಿ ಇ.ಎಮ್ ಅವರು, ಖ್ಯಾತ ಇತಿಹಾಸಕಾರ ಮತ್ತು ಭಾರತೀಯ ವಾರಿಯನ್ ಕುನ್ನಥ್ ಕುಞಹಮ್ಮದ್ ಹಾಜಿ ಪ್ರತಿಷ್ಠಾನದ ಅಧ್ಯಕ್ಷರಾದ ಅಲವಿ ಕಕ್ಕದನ್ ಅವರಿಗೆ ಮಾಪಿಳ್ಳ ಡಿಕ್ಷನರಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಜಮಾಅತ್ ಇಸ್ಲಾಮ್ ಹಿಂದ್ ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಕೀಮ್ ನದ್ವಿ, ಎಸ್.ಐ.ಒ ಕೇರಳ ರಾಜ್ಯ ಕಾರ್ಯದರ್ಶಿ ರಶಾದ್ ವಿ.ವಿ, ಎಸ್.ಐ.ಒ ಮಲಪ್ಪುರಮ್ ಜೊತೆ ಕಾರ್ಯದರ್ಶಿ ಸಹೇಲ್ ಬಾಸ್ ಸೇರಿದಂತೆ ಹಲವಾರು ಗಣ್ಯರು ಸೋಮವಾರ ಮಲಪ್ಪುರಮ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಹಿಂದೆ ನಡೆದ ತನ್ನ ಹೇಳಿಕೆಯಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾಪಿಳ್ಳ ದಂಗೆಯನ್ನು ತಾಲಿಬಾನ್ ಮನಸ್ಥಿತಿಗೆ ಹೋಲಿಕೆ ಮಾಡಿದ್ದರು.