ಹೊಸದಿಲ್ಲಿ: ಭಾರೀ ಮಳೆಯಿಂದಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಶುಕ್ರವಾರ ದೆಹಲಿಯಲ್ಲಿ ದಾಖಲೆ ಪ್ರಮಾಣದ 1,000 ಮಿಲಿ ಮೀಟರ್ ಮಳೆಯಾಗಿದ್ದು, ಇದು ಕಳೆದ 46 ವರ್ಷಗಳ ಬಳಿಕ ಸುರಿದ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ವೈಪರೀತ್ಯದಿಂದ ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಭಾರೀ ಮಳೆಯ ಪರಿಣಾಮ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೋ, ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಆಕಸ್ಮಿಕವಾಗಿ ಸುರಿದ ಭಾರೀ ಮಳೆಯ ಪರಿಣಾಮ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ನಮ್ಮ ತಂಡ ಶೀಘ್ರವೇ ಕಾರ್ಯಪ್ರವೃತ್ತವಾಗಿದ್ದು, ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.