ಧರ್ಮಸಿಂಗ್ ಸರ್ಕಾರ ಉರುಳಲು ಇಬ್ಬರ ಪಿತೂರಿ ಕಾರಣ | ವಾಟಾಳ್ ನಾಗರಾಜ್

Prasthutha|

ಬೆಂಗಳೂರ : ಇಬ್ಬರು ಮಹಾನ್‌ ಮುಖಂಡರು ಪಿತೂರಿ ಮಾಡಿ ಧರ್ಮಸಿಂಗ್‌ ಅವರ ಸರ್ಕಾರವನ್ನು ಉರುಳಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಬರಬಾರದ ರೋಗ ತಂದಿಟ್ಟರು ಎಂದು ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ವಿಷಾದಿಸಿದ್ದಾರೆ.ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿಂದು ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ರಾಜಚರಿತೆ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

- Advertisement -

ತಮ್ಮ ಸ್ವಾರ್ಥಕ್ಕೆ ಈ ಇಬ್ಬರು ಮುಖಂಡರು ಮುಖ್ಯಮಂತ್ರಿ ಧರ್ಮಸಿಂಗ್‌ ಅವರನ್ನು ಉರುಳಿಸಿದರು. ಒಂದು ವೇಳೆ ಧರ್ಮಸಿಂಗ್‌ ಪ್ರಬಲ ವರ್ಗದವರಾಗಿದ್ದರೆ ಇಂತಹ ಕಾರ್ಯ ಮಾಡಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ ಅವರು, ದುರ್ಬಲ ಜಾತಿಯವರಾಗಿದ್ದರಿಂದ ಧರ್ಮಸಿಂಗ್‌ ಅವರನ್ನು ನಿರಾಯಾಸವಾಗಿ ಇಳಿಸಲಾಯಿತು ಎಂದರು.ಅವತ್ತು ಹದಗೆಟ್ಟ ಕರ್ನಾಟಕದ ರಾಜಕಾರಣ ಎಂತಹ ಸ್ಥಿತಿಗೆ ಬಂದು ತಲುಪಿದೆ ಎಂದರೆ ರಾಜಚರಿತೆ ಬರೆದ ವಿಠ್ಠಲಮೂರ್ತಿ ಇನ್ನೇನಾದರೂ ಬರೆದರೆ ಭ್ರಷ್ಟರ ಚರಿತೆ ಎಂಬ ಪುಸ್ತಕವನ್ನು ಬರೆಯಬೇಕಾಗುತ್ತದೆ ಎಂದರು.

ಇವತ್ತು ರಾಜ್ಯದ ಪ್ರಬುದ್ಧ ನಾಯಕ ಎಂದಿದ್ದರೆ ಅದು ಸಿದ್ದರಾಮಯ್ಯ ಎಂದ ಅವರು, ಒಂದು ವೇಳೆ ಅವರು ರಾಜಕಾರಣದಿಂದ ದೂರ ಸರಿದರೆ ಕರ್ನಾಟಕದ ರಾಜಕಾರಣ ಎಂತಹ ದುರ್ಗತಿಗೆ ತಲುಪುತ್ತದೋ?ಊಹಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯ ರಾಜಕಾರಣ ನಡೆದು ಬಂದ ದಾರಿಯ ಬಗ್ಗೆ ವಿಶ್ಲೇಷಿಸಿದ ಅವರು, ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರದು ಹಲವು ಮಹಾನುಭಾವರಿದ್ದ ಸತ್ಯಹರಿಶ್ಚಂದ್ರನ ಸಂಪುಟ.ಇನ್ನು ಕನಸಿನಲ್ಲೂ ಅಂತಹ ಸಂಪುಟವನ್ನು ನೋಡಲು ಸಾಧ್ಯವಿಲ್ಲ ಎಂದರು.

- Advertisement -

ಕೆಂಗಲ್‌ ಹನುಮಂತಯ್ಯ ಅವರ ಸಂಪುಟದಲ್ಲಿದ್ದ ಸಿದ್ಧಲಿಂಗಯ್ಯ ಅವರು ತಮ್ಮ ಕುಟುಂಬದವರೊಬ್ಬರ ವಿರುದ್ಧ ಆರೋಪ ಬಂದಾಗ ಮಂತ್ರಿ ಸ್ಥಾನಕ್ಕೇ ರಾಜೀನಾಮೆ ನೀಡಿದರು. ಹಾಗೆ ನೋಡಿದರೆ ಅದು ಐವತ್ತು ಸಾವಿರ ರೂಗಳ ಹಗರಣದ ಆರೋಪ. ಆದರೆ ಈಗಿನ ಆಡಳಿತಗಾರರ ಬಾಯಿ ದೊಡ್ಡದು. ಹಡಗನ್ನೇ ಸುಲಭವಾಗಿ ನುಂಗಿ ಜೀರ್ಣಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.ಕೆಂಗಲ್‌ ಹನುಮಂತಯ್ಯ ಅವರಂತೆಯೇ ನಿಜಲಿಂಗಪ್ಪ ಬಹುದೊಡ್ಡ ನಾಯಕ. ಬೆಂಗಳೂರಿನಲ್ಲಿ ಅವರು ತಮ್ಮದು ಅಂತ ಒಂದು ನಿವೇಶನವನ್ನೂ ಮಾಡಿಕೊಂಡಿರಲಿಲ್ಲ.ಆದರೆ ಅವರ ವಿರುದ್ಧ ವಿನಾಕಾರಣ ಆಸ್ತಿ ಆರೋಪ ಮಾಡಿದ ನೋವು ನನ್ನನ್ನಿನ್ನೂ ಕಾಡುತ್ತಿದೆ ಎಂದರು.

ಇದೇ ರೀತಿ ಮುಖ್ಯಮಂತ್ರಿಯಾದ ಎಸ್.ಆರ್.ಕಂಠಿ,ಬಿ.ಡಿ.ಜತ್ತಿ,ವೀರೇಂದ್ರಪಾಟೀಲ್, ದೇವರಾಜ ಅರಸು ಅವರಂತವರೆಲ್ಲ ವ್ಯವಸ್ಥೆಗಾಗಿ ದುಡಿದರು.ಕೃಷ್ಣ ಅವರಂತವರೂ ಪರಿಸ್ಥಿತಿಯನ್ನು ತೂಗಿಸಿಕೊಂಡು ಹೋದರು.ಆದರೆ ಈಗಿನ ರಾಜಕಾರಣ ತಲುಪಿರುವ ಸ್ಥಿತಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಇದಕ್ಕೆ ಜನರೂ ಕಾರಣ ಎಂದ ಅವರು, ಒಂದು ಕಾಲದಲ್ಲಿ ಅಡುಗೆ ಅನಿಲಕ್ಕೆ ಎರಡು ರೂಪಾಯಿ ಹೆಚ್ಚಳವಾದರೆ ರಾಜಕೀಯ ಪಕ್ಷಗಳು ಬೀದಿಗಿಳಿಯುತ್ತಿದ್ದವು.ಆದರೆ ಈಗ ಇಪ್ಪತ್ತೈದು ರೂಪಾಯಿ ಜಾಸ್ತಿಯಾದರೆ ಜನರೂ ಮಾತನಾಡುವುದಿಲ್ಲ. ವಿರೋಧ ಪಕ್ಷಗಳಿಗೂ ಅದರ ವಿರುದ್ಧ ಹೋರಾಡುವ ಕೆಚ್ಚಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲ ಮಾತನಾಡಿ, ಕರ್ನಾಟಕದ ರಾಜಕಾರಣ ನಡೆದುಕೊಂಡು ಬಂದ ರೀತಿ, ಜಾತಿ ಸೈನ್ಯಗಳಿಗೆ ಮಠಾಧಿಪತಿಗಳು ಸೇನಾಧಿಪತಿಗಳಾದ ದುರಂತ ಸ್ಥಿತಿಯನ್ನು ರಾಜಚರಿತೆ ಹೇಳಿದೆ ಎಂದರು.ಯಾವ ಸನ್ನಿವೇಶಗಳಲ್ಲಿ ನಾಯಕರು ಮುಖ್ಯಮಂತ್ರಿಗಳಾದರು ಎಂಬುದರಿಂದ ಹಿಡಿದು ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಚಿತ್ರಣ ಇರುವ ಈ ಕೃತಿ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಬೇಕು ಎಂದರು.ಲೇಖಕ ಆರ್.ಟಿ.ವಿಠ್ಠಲಮೂರ್ತಿ ಮಾತನಾಡಿ ಕೃತಿಯ ಉದ್ದೇಶವನ್ನು ಹೇಳಿದರೆ ಸಾಧನ ಪಬ್ಲಿಕೇಷನ್ಸ್‌ನ ರವಿಚಂದ್ರ ಹಾಗೂ ಹಿರಿಯ ಪತ್ರಕರ್ತ ರಾಜಶೇಖರ್‌ ಅವರು ಉಪಸ್ಥಿತ ರಿದ್ದರು.



Join Whatsapp