ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಇಕ್ಬಾಲ್ ಸಿಂಗ್ ಲಾಲ್ಪುರ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಖ್ ಸಮುದಾಯಕ್ಕೆ ಸೇರಿರುವ ಲಾಲ್ಪುರ ಅವರು ಪ್ರಸಕ್ತ ಪಂಜಾಬ್ ಬಿಜೆಪಿ ಘಟಕದ ವಕ್ತಾರರಾಗಿದ್ದಾರೆ. ಸಿಖ್ ತತ್ವಶಾಸ್ತ್ರ, ಇತಿಹಾಸದ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ರಾಷ್ಟ್ರಪತಿಗಳ ಪೊಲೀಸ್ ಪದಕ, ಮೆರಿಟೋರಿಯಸ್ ಸೇವೆಗಳಿಗಾಗಿ ಪೊಲೀಸ್ ಪದಕ, ಶಿರೋಮಣಿ ಸಿಖ್ ಸಾಹಿತ್ಕರ್ ಪ್ರಶಸ್ತಿ ಮತ್ತು ಸಿಖ್ ವಿದ್ವಾಂಸ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆಯೋಗದ ಉಪಾಧ್ಯಕ್ಷರಾದ ಅತೀಫ್ ರಶೀದ್ ಮತ್ತು ಇತರ ಐದು ಸದಸ್ಯರ ಹುದ್ದೆಗಳು ಖಾಲಿ ಇವೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ (NCM) ಅಧಿಕೃತ ವೆಬ್ ಸೈಟ್ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ ನಿಂದ ಆಯೋಗದಲ್ಲಿ ಖಾಲಿಯಿರುವ 7 ಹುದ್ದೆಗಳಿಗೆ ನೇಮಕಾತಿ ಮಾಡದಿರುವ ಕುರಿತು ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರದಿಂದ ವಿವರಣೆ ಕೇಳಿತ್ತು. ಕಳೆದ ಅವಧಿಗೆ ಆಯೋಗದ ಅಧ್ಯಕ್ಷರಾಗಿ ಗಯೋರುಲ್ ಹಸನ್ ರಿಝ್ವಿ ಆಯ್ಕೆಯಾಗಿದ್ದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992ರ ಅಡಿಯಲ್ಲಿ NCM ಅನ್ನು ಸ್ಥಾಪಿಸಿತ್ತು. ಈ ಸಂಸ್ಥೆಯು ಪ್ರಮುಖವಾಗಿ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಸಮುದಾಯವನ್ನು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರೆಂದು ಸೂಚಿಸಿತ್ತು. ಜನವರಿ 27 2014ರ ಅಧಿಸೂಚನೆಯನ್ವಯ ಜೈನರನ್ನು ಅಲ್ಪಸಂಖ್ಯಾತ ಸಮುದಾಯವೆಂದು ಪರಿಗಣಿಸಲಾಗಿದೆ.