ತುಮಕೂರು: ಡಿಸಿಸಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ 20 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, ಡಿಸಿಸಿ ಬ್ಯಾಂಕ್ ನೌಕರ ಅಶ್ವತ್ಥ ನಾರಾಯಣಗೆ 9 ವರ್ಷ, ಗ್ರಾಹಕರಾದ ಶಾಂತಲಕ್ಷ್ಮಮ್ಮ ಹಾಗೂ ಬಶೀರ್ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಶೀರ್ ಅಹಮದ್ ಆದೇಶ ಹೊರಡಿಸಿದ್ದಾರೆ.
ಡಿಸಿಸಿ ಬ್ಯಾಂಕ್ನಲ್ಲಿ ಡಿಡಿ ಪುಸ್ತಕ ವಿತರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಶ್ವತ್ಥ ನಾರಾಯಣ 1999ರಲ್ಲಿ ಡಿಡಿ ಪುಸ್ತಕ ಕಳವು ಮಾಡಿ ಶಾಂತ ಲಕ್ಷ್ಮಮ್ಮ ಹಾಗೂ ಬಶೀರ್ಗೆ 34.85 ಲಕ್ಷ ರೂಪಾಯಿ ನೀಡುವ ಮೂಲಕ ಬ್ಯಾಂಕ್ ಗೆ ವಂಚಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2001ರಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಸುದೀರ್ಘ 20 ವರ್ಷಗಳ ಕಾಲ ನಡೆದಿದ್ದ ವಾದ ವಿವಾದದಲ್ಲಿ ಕೊನೆಗೂ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.