ಮಂಗಳೂರು: ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದ ಮೇಲೆ ಇತ್ತೀಚಿಗೆ ಉಳ್ಳಾಲದಲ್ಲಿ ನಡೆದ ವ್ಯಕ್ತಿಯೊಬ್ಬನ ಬಂಧನವನ್ನು ಮುಂದಿಟ್ಟುಕೊಂಡು ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದ್ದು, ಸಂಘಪರಿವಾರದ ಇಂತಹ ಯಾವುದೇ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಸ್.ಡಿ.ಪಿ.ಐ ದ.ಕ.ಜಿಲ್ಲಾಧ್ಯಕ್ಷ ಎ.ಎಂ.ಅಥಾವುಲ್ಲಾ ಹೇಳಿದ್ದಾರೆ.
ಉಳ್ಳಾಲದಲ್ಲಿ ಬಂಧಿಸಲ್ಪಟ್ಟ ಆರೋಪಿತ ವ್ಯಕ್ತಿಯ ಅಪರಾಧ ಸಾಬೀತಾದರೆ ಆತನಿಗೆ ಶಿಕ್ಷೆಯಾಗಲಿ. ಆದರೆ ಪ್ರಕರಣವು ಪ್ರಾಥಮಿಕ ತನಿಖೆಯ ಹಂತದಲ್ಲಿರುವಾಗ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿಕೊಂಡು ಕರಾವಳಿಯ ಶಾಂತಿ ಕದಡಲು ಯತ್ನಿಸುತ್ತಿರುವ ಕೃತ್ಯ ಸಹ್ಯವಲ್ಲ. ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತ ಪುತ್ತೂರಿನ ಕಡಬ ಮೂಲದ ಜಯ ಪ್ರಕಾಶ್ ಎನ್.ಐ.ಎ.ಯ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ ವ್ಯಕ್ತಿ. ಮಧ್ಯಪ್ರದೇಶದಲ್ಲಿ ಐಸಿಸ್ ನಂಟು ಆರೋಪದಲ್ಲಿ ಬಂಧಿತನಾದ ಧ್ರುವ ಸಕ್ಸೇನಾ ಬಿಜೆಪಿ ಐಟಿ ಸೆಲ್ ನ ಜಿಲ್ಲಾ ಸಂಯೋಜಕ. ಮಾತ್ರವಲ್ಲ, ಆತ ಮುಖ್ಯಮಂತ್ರಿ ಸಹಿತ ಅಲ್ಲಿನ ಬಿಜೆಪಿಯ ರಾಜ್ಯಮಟ್ಟದ ನಾಯಕರೊಂದಿಗೆ ಗುರುತಿಸಿಕೊಂಡಿರುವಾತ. ಈ ವಿಚಾರಗಳ ಬಗ್ಗೆ ಧ್ವನಿ ಎತ್ತದ ಶರಣ್ ಪಂಪ್ ವೆಲ್ ನಂತಹ ಸಂಘಪರಿವಾರದ ನಾಯಕರು ಸಂಶಯದ ಆಧಾರದಲ್ಲಿ ಮುಸ್ಲಿಮ್ ವ್ಯಕ್ತಿಯ ಬಂಧನವಾಗುವುದರೊಂದಿಗೆ ಇಡೀ ಮುಸ್ಲಿಮ್ ಸಮುದಾಯದ ತೇಜೋವಧೆಗೆ ಇಳಿಯುತ್ತಿರುವುದು ದುರದೃಷ್ಟಕರ ಎಂದು ಎ.ಎಂ.ಅಥಾವುಲ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಹಿಂಪ ನಾಯಕ ಶರಣ್ ಪಂಪ್ ವೆಲ್ ಮೇಲೆ ಮಂಗಳೂರಿನಲ್ಲಿ ಈಶ್ವರಿ ಮ್ಯಾನ್ ಪವರ್ ಸೊಲ್ಯೋಷನ್ ಮೂಲಕ ಹಿಂದು ಮಹಿಳೆಯರ ದುರುಪಯೋಗ ನಡೆಸುತ್ತಿರುವ ಆರೋಪ ನಿರಂತರವಾಗಿ ಕೇಳಿ ಬರುತ್ತಿದೆ. ಕೆಲಸ ಕೇಳಿ ಬಂದ ತನಗೆ ಶರಣ್ ಪಂಪ್ ವೆಲ್ ದೇಹ ಮಾರಾಟಕ್ಕೆ ಬಲವಂತಪಡಿಸಿದ್ದರೆಂದು ಓರ್ವ ಹಿಂದು ಯುವತಿ ಕೆಲ ಸಮಯಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದು ಬಹಳಷ್ಟು ಚರ್ಚೆಯಾಗಿತ್ತು. ಇಂತಹ ವಿಕೃತ ಮನೋಸ್ಥಿತಿಯ ಸಂಘಪರಿವಾರದ ನಾಯಕನೊಬ್ಬ ಹಿಂದು ಮಹಿಳೆಯರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಇದ್ದಂತೆ. ಸೌಹಾರ್ದದಿಂದಿರುವ ಕರಾವಳಿಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಸಂಘಪರಿವಾರದ ಷಡ್ಯಂತ್ರವನ್ನು ನಾಗರಿಕರು ಅರಿತುಕೊಳ್ಳಬೇಕು ಮತ್ತು ಇಂತಹ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದು ಎ.ಎಂ.ಅಥಾವುಲ್ಲಾ ಒತ್ತಾಯಿಸಿದ್ದಾರೆ.